ಬೆಳಗಾವಿ : ಜಿಲ್ಲೆಯ ಅಥಣಿ ನಗರಕ್ಕೆ ಹೊಂದಿಕೊಂಡಿರುವ ಅರಣ್ಯ ಇಲಾಖೆಯ ಗುಡ್ಡದ ಲಕ್ಷ್ಮೀ ದೈವಿ ವನದ 1.4 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಅರಣ್ಯ ಇಲಾಖೆಯು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ ಅಥಣಿ ಪಟ್ಟಣಕ್ಕೆ ಹೊಂದಿಕೊಂಡಿರುವ ಅರಣ್ಯ ಇಲಾಖೆಯ ಎತ್ತರದ ಪ್ರದೇಶದಲ್ಲಿ ಸಾರ್ವಜನಿಕರಿಗೆ 1.7 ಕಿ.ಮೀ ವಾಕಿಂಗ್ ಟ್ರ್ಯಾಕ್, 3 ಕಿ.ಮೀ ತಂತಿ ಬೇಲಿ, 1 ಎಕರೆ ಪ್ರದೇಶದಲ್ಲಿ ಮಕ್ಕಳ ಉದ್ಯಾನವನ, 20 ಗುಂಟೆ ಸ್ಥಳದಲ್ಲಿ ಯೋಗ ಮೈದಾನ, ಒಂದು ಕೆರೆ, 4 ಸಾವಿರ ಕ್ಕೂ ಹೆಚ್ಚು ಇಂಗು ಗುಂಡಿಗಳ ನಿರ್ಮಾಣ, 2.5 ಸಾವಿರ ಸಸಿಗಳ ಹಚ್ಚುವ ಕಾರ್ಯಕ್ರಮ ಸೇರಿ ಒಟ್ಟು 1 ಕೋಟಿ 40 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಇತ್ತಿಚಿನ ದಿನಗಳಲ್ಲಿ ನಾವು ನಗರಗಳನ್ನು ನಿರ್ಮಾಣ ಮಾಡಲು ಹೋಗಿ ಹೆಚ್ಚಿನ ಪ್ರಮಾಣದಲ್ಲಿ ಮರಗಳನ್ನು ಕಡಿಯುತ್ತಿದ್ದೇವೆ ಇದರಿಂದಾಗಿ ಮರಗಳ ಸಂಖ್ಯೆ ಕಡಿಮೆಯಾಗಿ ಶುದ್ದ ವಾಯು ಸಿಗದ ಸ್ಥಿತಿಗೆ ತಲುಪಿದ್ದೇವೆ. ಜನರಿಗೆ ಉತ್ತಮ ವಾತಾವರಣ, ಶುದ್ದ ಗಾಳಿ ಸಿಗಲಿ ಎಂಬ ದೃಷ್ಟಿಯಿಂದ ಈ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ರು.
ಈ ವೇಳೆ ಮರುಳಸಿದ್ದ ಸ್ವಾಮಿಜಿ, ಆರ್ಎಸ್ಎಸ್ ಮುಖಂಡ ಅರವಿಂದ ದೇಶಪಾಂಡೆ, ಮುಖಂಡರಾದ ದತ್ತಾ ವಾಸ್ಟರ್, ರಾಜೂ ಗುಡೋಡಗಿ, ರಾಜೂ ಚೌಗಲಾ, ಅಥಣಿ ಅರಣ್ಯ ವಲಯ ಅಧಿಕಾರಿ ಪ್ರಶಾಂತ ಗೌರಾಣಿ, ಉಪವಿಭಾಗಾಧಿಕಾರಿ ಶಿವಾನಂದ ನಾಯಿಕವಾಡಿ, ಎಸ್‍ಸಿ ಅಭ್ಯಂಕರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕೌಲಾಪುರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.