ಅಥಣಿ (ಬೆಳಗಾವಿ): ಹಾನಗಲ್ ಉಪಚುನಾವಣೆ ಸೋಲಿನ ಕುರಿತಂತೆ ಇದೇ ತಿಂಗಳ 9ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಚಿಂತನ-ಮಂಥನ ಸಭೆ ನಡೆಸಲಾಗುವುದು ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಹಾನಗಲ್ ಉಪಚುನಾವಣೆ ಸೋಲಿನ ಕುರಿತು ಚರ್ಚಿಸಲಾಗುವುದು. ಸಿಂದಗಿ, ಬಸವಕಲ್ಯಾಣ ಉಪಚುನಾವಣೆ ತಂತ್ರವನ್ನು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾರ್ಯಗತ ಮಾಡಲಾಗುವುದು ಎಂದಿದ್ದಾರೆ.
ನಾವು ಜನರ ತೀರ್ಪನ್ನು ಸ್ವಾಗತಿಸುತ್ತೇವೆ. ಹಾನಗಲ್ ಕ್ಷೇತ್ರದಲ್ಲಿ ಅಚ್ಚುಕಟ್ಟಾಗಿ ಚುನಾವಣೆ ಮಾಡಿದ್ದರು. ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಹಿಂದೆ ಕೊರೊನಾ ಸಂದರ್ಭದಲ್ಲಿ ಜನರಿಗೆ ಸಹಾಯ, ಸಂಪರ್ಕ ಮಾಡಿದ್ದರಿಂದ ಜನರು ಅವರನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋಲಿಗೆ ಇದೂ ಒಂದು ಪ್ರಮುಖ ಕಾರಣವಾಯಿತು ಎಂದಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ನಡೆಯಲಿದೆ. ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಅವರು ಈ ಕುರಿತಂತೆ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ನಮ್ಮ ಪಕ್ಷದ ನಾಯಕರಲ್ಲಿ ಯಾವುದೇ ಅಸಮಾಧಾನವಿಲ್ಲ. ನಾವು ಮುಂದಿನ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ ಎಂದು ಹೇಳಿದರು.