ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ನದಿಗಳಿಂದ ಪ್ರವಾಹ ಪರಿಸ್ಥಿತಿ ಉಂಟಾಗಿಲ್ಲ. ಆದ್ರೆ ಇನ್ನೂ ನಾಲ್ಕು ದಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜುಲೈ 27ರ ವರೆಗೆ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದ್ದಾರೆ.
ನಿಪ್ಪಾಣಿ ತಾಲೂಕಿನ ದೂಧ್ ಗಂಗಾ ನದಿ ತೀರದ ಹಲವು ಗ್ರಾಮಗಳಿಗೆ ಹಾಗೂ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಕೃಷ್ಣಾ ನದಿ ತೀರದ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಕಳೆದ ನಾಲ್ಕೈದು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆಗ್ತಿದೆ. ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಲಪ್ರಭಾ ನದಿಗೆ 13 ಸಾವಿರ, ಘಟಪ್ರಭಾ ನದಿಗೆ 30 ಸಾವಿರ ಕ್ಯೂಸೆಕ್ ನೀರು ಹರಿದು ಬರ್ತಿದೆ. ದೂಧ್ ಗಂಗಾ 9 ಸಾವಿರ ಕ್ಯೂಸೆಕ್, ವೇದಗಂಗಾ ನದಿಗೆ 13 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಮಾಹಿತಿ ನೀಡಿದರು.
ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಜಿಲ್ಲೆಯ ಕೆಳಹಂತದ ಸೇತುವೆಗಳು ಮುಳುಗಡೆ ಆಗಿವೆ. ಪ್ರವಾಹ ಪರಿಸ್ಥಿತಿ ಬಂದ್ರು ಸಹ ಜಿಲ್ಲಾಡಳಿತ ಎದುರಿಸಲು ಸಿದ್ಧವಾಗಿದೆ. ಪ್ರವಾಹ ಪರಿಸ್ಥಿತಿ ಉಂಟಾದ್ರೆ ಎದುರಿಸಲು ಜಿಲ್ಲೆಯಲ್ಲಿ ಈಗಾಗಲೇ ಒಂದು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡ ಬೀಡು ಬಿಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ. ಕೆಲವು ಕಡೆ ಈಗಾಗಲೇ ಕಾಳಜಿ ಕೆಂದ್ರಗಳನ್ನು ಸಹ ತೆರೆಯಲಾಗಿದೆ. ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಇನ್ನೂ ನಾಲ್ಕು ದಿನ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ನದಿ ತೀರದ ತೋಟದ ವಸತಿ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಆಗುವಂತೆ ಜನರಿಗೆ ಅವರು ಮನವಿ ಮಾಡಿದರು.