ಚಿಕ್ಕೋಡಿ(ಬೆಳಗಾವಿ): ಮುಂದೆ ಪ್ರತಿ ನವರಾತ್ರಿಯ ಸಂದರ್ಭದಲ್ಲಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮ ಅಯೋಜಿಸಲಾಗುವುದು ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬೃಹತ್ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿಯಲ್ಲಿ ನವರಾತ್ರಿಗೆ ವಿಶೇಷ ಸ್ಥಾನವಿದೆ. ಮೈಸೂರು ದಸರಾ ಸಂಭ್ರಮ ಒಂದೆಡೆಯಾದರೆ, ರಾಜ್ಯದ ವಿವಿಧ ಭಾಗಗಳಲ್ಲಿ ಇರುವಂತಹ ದೇವಸ್ಥಾನಗಳ ಮೂಲಕ ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಇಂದು ರಾಜ್ಯದ ಧಾರ್ಮಿಕ ಇಲಾಖೆಯ ಹಲವಾರು ದೇವಸ್ಥಾನಗಳಲ್ಲಿ ಶಕ್ತಿ ಸ್ವರೂಪಿಣಿ ಮಾತೆಯ ವಿಶೇಷ ಪೂಜೆಗೋಸ್ಕರ ಕುಂಕುಮಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ನನ್ನ ಮತಕ್ಷೇತ್ರದಲ್ಲಿ ಸುಮಾರು 10 ಸಾವಿರ ಮಹಿಳೆಯರನ್ನು ಒಗ್ಗೂಡಿಸಿ ಬೃಹತ್ ಕುಂಕುಮಾರ್ಚನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪದ್ಧತಿ ಮುಂದುವರಿಯಬೇಕು ಎನ್ನುವ ಆಶಯ ನಮ್ಮದಾಗಿದೆ. ಈ ಬಗ್ಗೆ ಸೂಕ್ತ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಹತ್ತು ಸಾವಿರ ಮಹಿಳೆಯರಿಂದ ಕುಂಕುಮಾರ್ಚನೆ ಕಾರ್ಯಕ್ರಮಕ್ಕೆ ಮಳೆ ಅಡ್ಡಿ:ನಿಪ್ಪಾಣಿಯಲ್ಲಿ ನಡೆದ ಸಾಮೂಹಿಕ ಬೃಹತ್ ಕುಂಕುಮಾರ್ಚನೆ ಕಾರ್ಯಕ್ರಮಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಸುಮಾರು 10 ಸಾವಿರ ಮಹಿಳೆಯರನ್ನು ಸೇರಿಸಿ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಧಾರಾಕಾರವಾಗಿ ಮಳೆಯಲ್ಲಿ ಸುರಿಯಿತು. ಆದರೆ ಮಳೆ ಆರ್ಭಟವನ್ನೂ ಲೆಕ್ಕಿಸದೇ ಸಾವಿರಾರು ಮಹಿಳೆಯರು ಕುಂಕುಮಾರ್ಚನೆಯಲ್ಲಿ ಭಾಗಿಯಾದರು.
ವಿಶೇಷ ದಾಖಲೆಗೆ ಸಾಕ್ಷಿ:ನಿಪ್ಪಾಣಿ ಕ್ಷೇತ್ರದ ಹಾಗೂ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 10 ಸಾವಿರಕ್ಕೂ ಹೆಚ್ಚು ಮಹಿಳೆಯರ ಜೊತೆಗೂಡಿ ಸಚಿವರು ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸಿದರು. ಕೊಲ್ಲಾಪುರದ ಮಹಾಲಕ್ಷ್ಮಿ ಅರ್ಚಕರ ಮುಂದಾಳತ್ವದಲ್ಲಿ ಕುಂಕುಮಾರ್ಚನೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಸುಮಾರು 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಏಕಕಾಲಕ್ಕೆ ಕುಂಕುಮಾರ್ಚನೆಯನ್ನು ನೆರವೇರಿಸುವ ಮೂಲಕ ವಿಶೇಷ ದಾಖಲೆಗೆ ಸಾಕ್ಷಿಯಾದರು.
ಹೋಳಿಗೆಯ ಹಬ್ಬದೂಟ:ಕುಂಕುಮಾರ್ಚನೆಯಲ್ಲಿ ಭಾಗವಹಿಸಿದ್ದ 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಹಾಗೂ ಅವರ ಕುಟುಂಬದವರಿಗೆ ಬೇಳೆ ಹೋಳಿಗೆಯ ಹಬ್ಬದೂಟವನ್ನ ಆಯೋಜಿಸಲಾಗಿತ್ತು. ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಹಬ್ಬದೂಟಕ್ಕೆ 2 ಟನ್ ಬೇಳೆಯನ್ನು ಬಳಸಿ ಹೋಳಿಗೆಯನ್ನು ತಯಾರಿಸಲಾಗಿತ್ತು.
ಇದನ್ನೂ ಓದಿ:ಲಲಿತಾ ಪಂಚಮಿಯಂದು ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ: ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ