ಅಥಣಿ:ಸಚಿವ ಸ್ಥಾನ ವಂಚಿತ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಎಂಎಸ್ಐಎಲ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ಸರ್ಕಾರ ನೀಡಿತ್ತು. ಆದ್ರೆ ಅದನ್ನು ತಿರಸ್ಕರಿಸಿರುವುದಾಗಿ ಕುಮಟಳ್ಳಿ ಹೇಳಿದ್ದಾರೆ.
ಅಥಣಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,30 ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಈಗ ಮೂವತ್ತು ವರ್ಷ ಬಿಜೆಪಿಯಲ್ಲಿ ಇರುತ್ತೇನೆ. ಬಂಡಾಯ ಎನ್ನುವುದು ಹಗುರವಾದ ಕೆಲಸ ಅಲ್ಲ. ನನಗೆ ಬಂಡಾಯ ಅಂದಾಗ ಕಳೆದ 15 ತಿಂಗಳ ಅನುಭವ ನೆನಪಾಗುತ್ತದೆ ಎಂದಿದ್ದಾರೆ.
ಎಂಎಸ್ಐಎಲ್ ನಿಗಮ ಮಂಡಳಿ ಸ್ಥಾನ ತಿರಸ್ಕರಿಸಿದ ಕುಮಟಳ್ಳಿ ಸಚಿವ ಸ್ಥಾನ ಸಿಗದಿದ್ದರೂ ಪಕ್ಷದ ಹಿತಾಸಕ್ತಿಗಾಗಿ ನಾನು ಮೌನವಾಗಿದ್ದೇನೆ. ನನಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೆ ನಿಗಮ ಮಂಡಳಿ ಕೊಡುವುದಾಗಿ ಭರವಸೆ ನೀಡಿದ್ದರು. ನಿನ್ನೆ ಸಂಜೆ ಮಾಧ್ಯಮಗಳ ಮೂಲಕ ಎಂಎಸ್ಐಎಲ್ ನಿಗಮ ಮಂಡಳಿ ಕೊಟ್ಟಿರುವುದು ತಿಳಿದಿದೆ. ಆದರೆ ನಾನು ಬಿ.ಇ. ಸಿವಿಲ್ ಎಂಜಿನಿಯರಿಂಗ್ ಓದಿರುವುದರಿಂದ, ನನಗೆ ಲ್ಯಾಂಡ್ ಆರ್ಮಿ ಕೊಟ್ಟರೆ ಸೂಕ್ತ ಎನ್ನುವ ಭಾವನೆ ನನ್ನದು ಎಂದರು.
ಈ ಬಗ್ಗೆ ವರಿಷ್ಠರ ಜೊತೆಗೆ ಮಾತನಾಡಲು ಇಂದು ಬೆಂಗಳೂರಿಗೆ ತೆರಳುತ್ತಿದ್ದೇನೆ. ಕೊಡುವುದಾದರೆ ನನಗೆ ಲ್ಯಾಂಡ್ ಆರ್ಮಿ ಕೊಡುವಂತೆ ವರಿಷ್ಠರಿಗೆ ಮನವರಿಕೆ ಮಾಡುತ್ತೇನೆ ಎಂದಿದ್ದಾರೆ. ಬಿಜೆಪಿಯಲ್ಲಿ ಮೂಲ ಬಿಜೆಪಿಗರು ಮತ್ತು ವಲಸಿಗರು ಎನ್ನುವ ಭಿನ್ನಾಭಿಪ್ರಾಯ ಇಲ್ಲ. ಖಾತೆ ಹಂಚಿಕೆ ವೇಳೆ ಕೆಲವು ತೊಂದರೆ ಉಂಟಾಗಿ ನನಗೆ ತಾಳ್ಮೆಯಿಂದ ಇರುವಂತೆ ಹೇಳಿದ್ದರಿಂದ ಮೌನ ವಹಿಸಿದ್ದೇನೆ. ಅಥಣಿ ಮತಕ್ಷೇತ್ರದ ಜನ ಜಾತ್ಯಾತೀತವಾಗಿ ನನಗೆ ಮತ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಕುಮಟಳ್ಳಿ ಹೇಳಿದ್ರು.