ಬೆಳಗಾವಿ :ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಿಂದ ತುಂಬಾ ದೂರ ಹೋಗಿದ್ದಾರೆ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಸ್ಥಾನ ನೀಡಿದ್ರೂ ರಮೇಶ್ ಮೈತ್ರಿ ಸರ್ಕಾರ ಅಲುಗಾಡಿಸೋದದನ್ನು ಬಿಡಲ್ಲ ಅಂತಾ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಸರ್ಕಾರ ಉರುಳಿಸುವ ಕೆಲಸ ಕೈಬಿಟ್ಟಿಲ್ಲ. ಅವನಿಗೆ ಯಾವುದೇ ಸಚಿವ ಸ್ಥಾನ ಬೇಕಾಗಿಲ್ಲ. ಪ್ರಧಾನಮಂತ್ರಿ, ಮುಖ್ಯಮಂತ್ರಿ ಹುದ್ದೆ ಕೊಟ್ಟರೂ ಅವನು ಸರ್ಕಾರ ಅಲುಗಾಡಿಸೋದನ್ನು ಮಾತ್ರ ಕೈಬಿಡಲ್ಲ ಎಂದಿದ್ದಾರೆ.
ಚಿಕ್ಕೋಡಿ ಹಾಗೂ ಬೆಳಗಾವಿ ಸೋಲಿಗೆ ಮೋದಿಯ ಅಲೆ ಕಾರಣ. ಇಲ್ಲಿ ರಮೇಶ್ ಜಾರಕಿಹೊಳಿ ಮಾಡಿದ ಯಾವುದೇ ಕೆಲಸ ಉಪಯೋಗಕ್ಕೆ ಬಂದಿಲ್ಲ. ನಮಗೆ ಬೆಳಗಾವಿ ಸೋಲು ಮೊದಲೇ ಗೊತ್ತಿತ್ತು. ಆದರೆ, ಚಿಕ್ಕೋಡಿ ಸೋಲು ಬೇಸರ ತಂದಿದೆ ಎಂದರು.
ಮೋದಿ ಕೊಟ್ಟ ಔಷಧ ಸಮ್ಮಿಶ್ರ ಸರ್ಕಾರಕ್ಕೆ ಸರಿ ನಾಟಿದೆ :
ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿದ್ದವು. ಆದರೆ, ಈವರೆಗೂ ಯಾವುದೇ ಔಷಧ ನಾಟಿರಲಿಲ್ಲ. ಆದರೆ, ನರೇಂದ್ರ ಮೋದಿ ಕೊಟ್ಟ ಔಷಧ ಸರಿಯಾಗಿ ಕೆಲಸ ಮಾಡಿದೆ. ಸರ್ಕಾರ ಗಟ್ಟಿಯಾಗಲು ಸಹಕಾರಿಯಾಗಿದೆ ಎಂದರು. ಸರ್ಕಾರ ರಚನೆಯಾದಾಗಿಂದ ಅನೇಕ ಭಿನ್ನಾಭಿಪ್ರಾಯ ಇದ್ದವು. ಅದನ್ನು ಎಷ್ಟೇ ಪ್ರಯತ್ನ ಪಟ್ಟರೂ ಸರಿಪಡಿಸಲು ಸಾಧ್ಯವಾಗಿರಲಿಲ್ಲ. ಆದರೆ, ಮೋದಿ ಗೆಲುವು ನಮ್ಮ ಕಷ್ಟ ದೂರ ಮಾಡಿದೆ ಎಂದು ಪರೋಕ್ಷವಾಗಿ ಮೋದಿ ಅಲೆ ಒಪ್ಪಿಕೊಂಡಿದ್ದಾರೆ.
ಮೋದಿ ಹೇಳಿರುವಂತೆ ದ್ವೇಷ ರಾಜಕೀಯ ಮಾಡಲ್ಲ ಎಂದಿದ್ದಾರೆ. ಮಾತಿನಂತೆ ನಡೆದುಕೊಂಡರೆ ನಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಬಿಜೆಪಿ ಆಪರೇಷನ್ ಕಮಲ ಮಾಡಿದರೆ ಕಾಂಗ್ರೆಸ್ ಸುಮ್ಮನೆ ಕುಳಿತುಕೊಳ್ಳಲ್ಲ. ನಮ್ಮಲ್ಲಿಯೂ ಅವರ ಶಾಸಕರನ್ನು ಕರೆ ತರುತ್ತಾರೆ ಎಂದರು.