ಚಿಕ್ಕೋಡಿ :ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ನಡೆಸಿರುವ ಮಿಷನ್ ಅಂತ್ಯೋದಯ 2020ರ ಬೇಸ್‌ಲೈನ್ ಸರ್ವೆಯಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತ್ 100ಕ್ಕೆ ಶೇ.88ರಷ್ಟು ಅಂಕ ಪಡೆದು ದೇಶಕ್ಕೆ 3ನೇ ಸ್ಥಾನ ಪಡೆದಿದೆ. ಸತತ ಮೂರನೇ ಬಾರಿಗೆ ಟಾಪ್ 10 ಪಟ್ಟಿಯಲ್ಲಿದೆ.
ಕುಲಗೋಡ ಗ್ರಾಪಂ 16 ಸದಸ್ಯರ ಬಲ ಹೊಂದಿದೆ. ತನ್ನ ವ್ಯಾಪ್ತಿಯಲ್ಲಿ ಒಟ್ಟು 7039 ಜನಸಂಖ್ಯೆ ಹೊಂದಿದೆ. ಅದರಲ್ಲಿ 3538-ಪುರುಷ, 3501-ಮಹಿಳೆ ಜನ ಇದ್ದಾರೆ. ಈ ಪಂಚಾಯತ್ ವ್ಯಾಪ್ತಿಗೆ 1308 ಕುಟುಂಬ ಬರುತ್ತವೆ. ಈ ವ್ಯಾಪ್ತಿಯ ಗ್ರಾಮಗಳಲ್ಲಿ ಸಿಂಡಿಕೇಟ್, ಕೆನರಾ ಎರಡು ರಾಷ್ಟ್ರೀಕೃತ ಬ್ಯಾಂಕುಗಳಿವೆ. ಎಟಿಎಂ ಸೌಲಭ್ಯವನ್ನು ಹೊಂದಿವೆ. ಡಿಸಿಸಿ ಬ್ಯಾಂಕ್, ಪೊಲೀಸ್ ಠಾಣೆ ಹಾಗೇ ಗ್ರಾಮಕ್ಕೆ ಉತ್ತಮ ರಸ್ತೆ ಸಂಪರ್ಕ ಕೂಡ ಇದೆ.
ಗ್ರಾಮದಿಂದ ಬೆಳಗಾವಿ, ಬಾಗಲಕೋಟ ಮುಂತಾದ ತಾಲೂಕು, ಜಿಲ್ಲಾ ಕೇಂದ್ರಕ್ಕೆ ಬಸ್ ಸಂಪರ್ಕವಿದೆ. ಇಂಟರ್ನೆಟ್ ಸಾಮಾನ್ಯ ಸೇವಾ ಕೇಂದ್ರ, 110 ಕೆವಿ ವಿದ್ಯುತ್ ಕೇಂದ್ರ, ದಿನದ 24 ಗಂಟೆ ವಿದ್ಯುತ್ ಸಂಪರ್ಕ, ನ್ಯಾಯ ಬೆಲೆ ಅಂಗಡಿ, ಅಟಲ್‍ಜೀ ಜನಸ್ನೇಹಿ ಕೇಂದ್ರ, ಮಾರುಕಟ್ಟೆ, ಪ್ರತಿ ಮನೆಗೂ ನೀರಿಗಾಗಿ ನಲ್ಲಿ ಸೌಲಭ್ಯ, 4 ಶುದ್ಧ ಕುಡಿಯುವ ನೀರಿನ ಘಟಕ, ಬಿಎಸ್‍ಎನ್‍ಎಲ್ ಗ್ರಾಹಕ ಸೇವಾ ಕೇಂದ್ರ, ಮೊಬೈಲ್ ಸ್ಥಿರ ದೂರವಾಣಿ ವೈ-ಫೈ ವ್ಯವಸ್ಥೆ, ಶೇ.80ರಷ್ಟು ಕುಟುಂಬಗಳಿಗೆ ಎಲ್‍ಪಿಜಿ ಸೌಲಭ್ಯ, ಉಪ ಅಂಚೆ ಕಚೇರಿ, 8 ಅಂಗನವಾಡಿ ಕೇಂದ್ರ, ಶತಮಾನ ಕಂಡ 2 ಸರ್ಕಾರಿ ಪ್ರಾಥಮಿಕ ಶಾಲೆ ಸೇರಿ 6 ಪ್ರಾಥಮಿಕ ಶಾಲೆಗಳು, 2 ಅನುದಾನಿತ ಪ್ರೌಢ ಶಾಲೆ, ಖಾಸಗಿ ಐಟಿಐ, ಪದವಿಪೂರ್ವ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ, ಕೃಷಿ ಸೇವಾ ಕೇಂದ್ರ, ತ್ಯಾಜ್ಯ ವಿಲೇವಾರಿ ಘಟಕ ಮತ್ತು ವಾಹನ ಮತ್ತು ವೈಯಕ್ತಿಕ ಮತ್ತು ಗುಂಪು ಶೌಚಾಲಯ ಸೌಲಭ್ಯ ಹೊಂದಿದೆ.
ಕುಲಗೋಡ ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಈ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ನೂರಕ್ಕೂ ಹೆಚ್ಚು ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಪೆಟ್ರೋಲ್ ಬಂಕ್ ಇದೆ. ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣವಿದೆ. ಮೂರು ಜೌಷಧ ಅಂಗಡಿಗಳಿವೆ. ಗ್ರಾಮದಲ್ಲಿ ಈಗಾಗಲೇ ಶಾಸಕರ ಸಹಕಾರದಿಂದ ಸುವರ್ಣ ಗ್ರಾಮೋದಯ ಯೋಜನೆ, ಸ್ವಚ್ಛ ಗ್ರಾಮ ಯೋಜನೆ ಅನುಷ್ಠಾನ ಮಾಡಲಾಗಿದೆ. ಸ್ವಚ್ಛತೆಗೆ ಗ್ರಾಮದಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದು, ಗ್ರಾಮದ ತುಂಬೆಲ್ಲಾ ಕಾಂಕ್ರೀಟ್ ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು, ಈ ಕುಲಗೋಡ ಗ್ರಾಮ ಪಂಚಾಯತ್ ಅಕ್ಟೋಬರ್ 2ರಂದು ವಿಧಾನಸೌಧದ ಬ್ಯಾಂಕ್ವೇಟ್ ಹಾಲ್‍ನಲ್ಲಿ ನಡೆದ 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ.
ಇದನ್ನೂ ಓದಿ:ಇನ್ಮುಂದೆ ರೈತನ ಬಳಿ ಇರಲಿದೆ 'ಸ್ವಾಭಿಮಾನಿ ರೈತ' ಗುರುತಿನ ಚೀಟಿ