ನಿಪ್ಪಾಣಿ: ಕೆಎಸ್ಆರ್‌ಟಿಸಿ ಬಸ್ ಪಲ್ಟಿ; 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ ಚಿಕ್ಕೋಡಿ(ಬೆಳಗಾವಿ): ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಕೆಎಸ್ಆರ್‌ಟಿಸಿ ಬಸ್ ಪಕ್ಕದ ಕಾಲುವೆಗೆ ಬಿದ್ದ ಘಟನೆ ಇಂದು ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ನಡೆಯಿತು. ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ.
ಮಹಾರಾಷ್ಟ್ರದ ಇಂಚಲಕರಂಜಿಯಿಂದ ನಿಪ್ಪಾಣಿಗೆ ಆಗಮಿಸುವ ದಾರಿಮಧ್ಯೆ ಅಪಘಾತ ಸಂಭವಿಸಿತು. ಬೈಕ್ ಸವಾರ ಹಠಾತ್ ಬಸ್‌ಗೆ ಅಡ್ಡ ಬಂದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ದುರಂತ ಘಟಿಸಿದೆ. ಸಮೀಪವೇ ಇದ್ದ ಹೈವೋಲ್ಟೇಜ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುವುದು ತಪ್ಪಿದ ಕಾರಣ ಪ್ರಯಾಣಿಕರು ಭಾರಿ ಅನಾಹುತದಿಂದ 75 ಪ್ರಯಾಣಿಕರು ಪಾರಾಗಿದ್ದಾರೆ.
ಬಸ್ ಉರುಳುತ್ತಿದ್ದಂತೆ ಸ್ಥಳೀಯರ ಸಹಾಯದಿಂದ ಪ್ರಯಾಣಿಕರನ್ನು ಮೇಲಕ್ಕೆತ್ತಲಾಗಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಿಪ್ಪಾಣಿ ಆಸ್ಪತ್ರೆಗೆ ರವಾನಿಸಲಾಗಿದೆ. ಬೈಕ್ ಸವಾರನ ಪರಿಸ್ಥಿತಿ ಚಿಂತಾಜನಕವಾಗಿದ್ದು, ನಿಪ್ಪಾಣಿ ಆಸ್ಪತ್ರೆಗೆ ಸೇರಿಸಲಾಗಿದೆ.
ಅಪಘಾತದ ಕಾರಣ ನಿಪ್ಪಾಣಿ-ಗಳತಗಾ ರಸ್ತೆಯಲ್ಲಿ ವಾಹನ ದಟ್ಟನೆ ಉಂಟಾಗಿತ್ತು. ಸದಲಗಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಹೆದ್ದಾರಿಯಲ್ಲಿ ಆವರಿಸಿದ ಮಂಜು: ಲಾರಿ - ಬಸ್ಗಳ ನಡುವೆ ಸರಣಿ ಅಪಘಾತ, 30 ಮಂದಿಗೆ ಗಾಯ