ಕರ್ನಾಟಕ

karnataka

ETV Bharat / state

ಆಟ ಆಡಲು ಬಂದಿದ್ದೀರಾ, ಜವಾಬ್ದಾರಿ ಬೇಡ್ವಾ.. ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಈಶ್ವರಪ್ಪ ಕೆಂಡ

ಜಲಜೀವನ ಮಿಷನ್ ಯೋಜನೆಯಡಿ ಕೇಂದ್ರ ಸರ್ಕಾರವು ಶೇ.50ರಷ್ಟು ಹಣಕಾಸಿನ ನೆರವು ಒದಗಿಸುವುದರಿಂದ ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ತಲುಪಿಸಬೇಕು. ಎಲ್ಲ ಜಿಲ್ಲೆಗಳಿಗೆ ಮಾಹೆವಾರು ಗುರಿ ನಿಗದಿಪಡಿಸಿ ಗುರಿಸಾಧನೆಯ ಮೇಲ್ವಿಚಾರಣೆ ನಡೆಸಬೇಕು..

Belgaum
ಈಶ್ವರಪ್ಪ

By

Published : Aug 29, 2020, 10:08 PM IST

ಬೆಳಗಾವಿ:ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಅಂದ್ರೇ ಟೋಪಿ ಹಾಕುವ ವ್ಯವಹಾರವಾಗಿದೆ. ರಾಜ್ಯದ ಜನರಿಗೆ ಇವುಗಳು ಮೋಸ ಮಾಡುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್ ಇಲಾಖೆಯ ಸಚಿವ ಕೆ ಎಸ್‌ ಈಶ್ವರಪ್ಪ ಆರೋಪಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆಯ ಬಗ್ಗೆ ಸಾಕಷ್ಟು ದೂರುಗಳಿವೆ. ರಾಜ್ಯದ ಜನರ ಹಣ ಪಡೆದುಕೊಂಡು ಅನ್ಯಾಯ ಮಾಡಲಾಗುತ್ತಿದೆ. ಹೀಗಾಗಿ ಘಟಕಗಳ ಸಮರ್ಪಕ ಬಳಕೆಗೆ ಮುಂಬರುವ ದಿನಗಳಲ್ಲಿ ದುರಸ್ಥಿ ಮತ್ತು ನಿರ್ವಹಣೆಯ ಬಗ್ಗೆ ಸಮರ್ಪಕ ಯೋಜನೆ ರೂಪಿಸಬೇಕು ಎಂದು ಸಿಇಒಗೆ ಸೂಚನೆ‌ ನೀಡಿದರು.

ಕೆಲ ಅಧಿಕಾರಿಗಳು ಮಾಹಿತಿ ಗೊತ್ತಿಲ್ಲದಿದ್ದರೂ ಇದ್ದಕ್ಕಿದ್ದಂತೆ ಯಾವಾಗಿನದೋ, ಇಲ್ಲ‌ ಐದಾರು ತಿಂಗಳ ಹಿಂದೆ ಮಾಡಿಕೊಂಡಿರೋ ರಿಪೋರ್ಟ್ ಕೊಡ್ತಾರೆ. ಇದನ್ನು ನಾವು ನಂಬಬೇಕಾ? ಅವರು ಕೊಡ್ತಿರೋ ವರದಿ, ನೀವು ಕೊಡ್ತಿರೋ ವರದಿ ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಅಭಿಯಂತರ ಪಿ.ಬಿ ಹೊಳೆಯಾಚಿ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

ಯಾರ್ಯಾರು ಎಷ್ಟೆಷ್ಟು ತಿಂದು ಹಾಳಾಗಿ ಹೋಗ್ತಾರೆ ಹೋಗ್ಲಿ. ಜನಕ್ಕೆ ನೀರು ಬೇಕಲ್ಲ. ನೀರು ಕೊಡೊದಕ್ಕೆ ಏನು ಮಾಡ್ತೀರಾ? ಹೇಳಿ ಎಂದು ಹೊಳೆಯಾಚಿ ಅವರನ್ನು ಪ್ರಶ್ನಿಸಿದ ಸಚಿವರು, ನಾನು ಬಂದು ಈಗ ಒಂದು ವರ್ಷವಾಯಿತು ನಿಮ್ಮ ಇಡೀ ಜೀವನವನ್ನೇ ಇದರಲ್ಲಿ ಕಳೆದಿದ್ದೀರಿ. ಶುದ್ಧ ಘಟಕಗಳ ನಿರ್ವಹಣೆ ಸಮಸ್ಯೆ ‌ಕೇಳಿ ನಂಗೂ ಸಾಕಾಗಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಪಂ ಸಿಇಒ ರೂಪಿಸಿರೋ ಆನ್​ಲೈನ್ ಮಾಹಿತಿ ವ್ಯವಸ್ಥೆ ಯೋಜನೆ ಯಶಸ್ವಿಯಾದ್ರೆ, ಇಡೀ ರಾಜ್ಯಕ್ಕೆ ಅದನ್ನು ವಿಸ್ತರಿಸಲು ಕ್ರಮಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸಂಬಂಧಿಸಿದ ನೀರಿನ ಪೈಪ್​ಲೈನ್ ಕಾಮಗಾರಿಯ 985 ಲಕ್ಷ ರೂ.ಗಳ ಯೋಜನೆ ಸಂಬಂಧ ಕುರಿತು ತಪ್ಪು ವರದಿ ಸಲ್ಲಿಸಿದ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಸಚಿವ ಈಶ್ವರಪ್ಪ, ಸಂಬಂಧಿಸಿದ ಇಂಜಿನಿಯರ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಜಯರಾಮ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಇನ್ನು, ಇಷ್ಟೆಲ್ಲಾ ವಿಷಯಗಳು ಚರ್ಚೆ ಆಗುತ್ತಿದ್ದರೂ ಏನೂ ಗೊತ್ತಿಲ್ಲದಂತೆ ಸುಮ್ಮನೆ ಕುಳಿತ್ತಿದ್ದ ಇಂಜಿನಿಯರ್​ಗೆ ಕ್ಲಾಸ್ ತೆಗೆದುಕೊಂಡ ಸಚಿವರು, ಇಲಾಖೆ ವಿಷಯ ಚರ್ಚೆ ನಡೆಸುವಾಗ ಸುಮ್ನೇ ಕುಳಿತುಕೊಳ್ಳಲು ಬಂದಿದ್ದೀರಾ, ನಾವೇನು ಆಟ ಆಡಲಿಕ್ಕೆ ಬಂದಿದ್ದೀವಾ, ಜ್ಞಾನ ಬೇಡ್ವಾ ನಿಮ್ಗೆ.. ಜವಾಬ್ದಾರಿ ‌ಇಲ್ವಾ?. ಸರ್ಕಾರಿ ಸಂಬಳ‌ ಹೇಗೆ ತೆಗೆದುಕೊಳ್ಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸರ್ಕಾರದ ದುಡ್ಡು ಅಂದ್ರೆ ಏನು ಅಂದುಕೊಂಡಿದ್ದೀರಾ, ತಕ್ಷಣವೇ ಈ ಕುರಿತು ಸಮಗ್ರ ರಿಪೋರ್ಟ್ ಸಲ್ಲಿಸಬೇಕು. ಜೊತೆಗೆ ಈ ಕುರಿತು ತನಿಖೆ ನಡೆಸಲು ಜಿಪಂ ಸಿಇಒ ದರ್ಶನ್ ಅವರಿಗೆ ಸೂಚನೆ ನೀಡಿದರು. ಜಲಜೀವನ ಮಿಷನ್ ಯೋಜನೆಯಡಿ ಕೇಂದ್ರ ಸರ್ಕಾರವು ಶೇ.50ರಷ್ಟು ಹಣಕಾಸಿನ ನೆರವು ಒದಗಿಸುವುದರಿಂದ ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ತಲುಪಿಸಬೇಕು. ಎಲ್ಲ ಜಿಲ್ಲೆಗಳಿಗೆ ಮಾಹೆವಾರು ಗುರಿ ನಿಗದಿಪಡಿಸಿ ಗುರಿಸಾಧನೆಯ ಮೇಲ್ವಿಚಾರಣೆ ನಡೆಸಬೇಕು. ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಕಾಮಗಾರಿಗಳ ಕುರಿತು ಜಿಪಂ ಸಿಇಒ ವರದಿ ನೀಡಬೇಕು. ಬಾಕಿ ಉಳಿದಿರುವ 200 ಗ್ರಾಮ ಪಂಚಾಯತ್‌ಗಳಲ್ಲಿ ಘನತ್ಯಾಜ್ಯ ಘಟಕ ಸ್ಥಾಪನೆ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸುವಂತೆ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತ ಅನಿರುದ್ಧ ಶ್ರವಣ್ ಮಾತನಾಡಿ, ಉದ್ಯೋಗ ಖಾತ್ರಿ ಅನುದಾನ, ಸ್ವಚ್ಛ ಭಾರತ ಮಿಷನ್ ಹಾಗೂ 15ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಂಡು ಮುಂದಿನ ಮಾರ್ಚ್ ವೇಳೆಗೆ ಎಲ್ಲ ಗ್ರಾಮ‌ ಪಂಚಾಯತ್​ಗಳಲ್ಲೂ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಜಯರಾಮ್ ಮತ್ತಿತರರು ಇದ್ದರು

ABOUT THE AUTHOR

...view details