ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 187 ಸ್ಥಳಗಳನ್ನು ಅಪಘಾತ ಮುಕ್ತ ಸ್ಥಳಗಳಾಗಿ ಅಭಿವೃದ್ದಿ: ಕೃಷ್ಣಬೈರೇಗೌಡ

ರಾಜ್ಯದಲ್ಲಿ 187 ಆ್ಯಕ್ಸಿಡೆಂಟ್​ ಸ್ಥಳಗಳನ್ನು ಅಪಘಾತ ಮುಕ್ತ ಸ್ಥಳಗಳನ್ನಾಗಿ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಕೃಷ್ಣಬೈರೇಗೌಡ
ಕೃಷ್ಣಬೈರೇಗೌಡ

By ETV Bharat Karnataka Team

Published : Dec 13, 2023, 7:58 PM IST

ಬೆಳಗಾವಿ/ ಬೆಂಗಳೂರು : ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳ ವಲಯಗಳಲ್ಲಿನ ಅಡಿಯಲ್ಲಿ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿನ 187 ಕಪ್ಪು ಸ್ಥಳಗಳನ್ನು( ಅಪಘಾತ ವಲಯಗಳನ್ನು) ರೂ. 232 ಕೋಟಿ ಅಂದಾಜು ಮೊತ್ತದಲ್ಲಿ ಪಿ.ಆರ್.ಎ.ಎಂ.ಸಿ ವತಿಯಿಂದ ಅಭಿವೃದ್ದಿಪಡಿಸಿ ಅಪಘಾತ ಮುಕ್ತ ಸ್ಥಳಗಳನ್ನಾಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ 182 ಕಪ್ಪುಸ್ಥಳಗಳ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಬಾಕಿ ಉಳಿದ 5 ಕಾಮಗಾರಿಗಳು ಪ್ರಗತಿಯಲ್ಲಿವೆ. ಇದುವರೆಗೆ ಸದರಿ ಕಪ್ಪು ಸ್ಥಳಗಳ ಅಭಿವೃದ್ದಿಗೆ ರೂ. 138.41 ಕೋಟಿ ವೆಚ್ಚ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.

ವಿಧಾನಪರಿಷತ್‌ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಕೆ ಎ ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲೋಕೋಪಯೋಗಿ ಸಚಿವರ ಪರವಾಗಿ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ, ಪಿ.ಆರ್.ಎ.ಎಂ.ಸಿ ವತಿಯಿಂದ ಹಾಗೂ ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳ ವಲಯಗಳ ಅಡಿಯಲ್ಲಿನ ವಿಭಾಗಗಳ ವತಿಯಿಂದ ಇಲ್ಲಿಯವರೆಗೆ ಅಭಿವೃದ್ಧಿಪಡಿಸಿರುವ ಒಟ್ಟು 205 ಕಪ್ಪು ಸ್ಥಳಗಳ ಅನುಷ್ಠಾನ್ನೊತ್ತರ ಅಧ್ಯಯನ (Post implementation study) ವನ್ನು ವೈಜ್ಞಾನಿಕವಾಗಿ ಕೈಗೊಳ್ಳಲು ವಿವಿಧ ತಾಂತ್ರಿಕ ಕಾಲೇಜುಗಳಿಗೆ ವಹಿಸಿಕೊಡಲಾಗಿದ್ದು, ಇಲ್ಲಿಯವರೆಗೆ ಅಭಿವೃದ್ಧಿಪಡಿಸಲಾದ 99 ಕಪ್ಪು ಸ್ಥಳಗಳ 3 ವರ್ಷಗಳ ವಾರ್ಷಿಕವಾರು ಅಧ್ಯಯನ ವರದಿಗಳು ಸ್ವೀಕೃತವಾಗಿದ್ದು, ಸದರಿ ಅಧ್ಯಯನ ವರದಿಯಾನುಸಾರ ಅಭಿವೃದ್ಧಿಪಡಿಸಲಾದ ಕಪ್ಪು ಸ್ಥಳಗಳಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಕಂಡು ಬಂದಿರುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ 2,73,778 ಎಕರೆ/ಗುಂಟೆ ಸರ್ಕಾರಿ ಜಮೀನು ಒತ್ತುವರಿಯಿಂದ ತೆರವು : ರಾಜ್ಯಾದ್ಯಾಂತ 2,73,778 ಎಕರೆ/ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದ್ದು, ರಾಜ್ಯಾದ್ಯಂತ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿರುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಸದಸ್ಯ ಡಾ. ವೈ. ಎ ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯಾದ್ಯಂತ ಒಟ್ಟು 63,32,486 ಎಕರೆ/ಗುಂಟೆ ಸರ್ಕಾರಿ ಜಮೀನಿದ್ದು, ಇದರಲ್ಲಿ 14,72,493 ಎಕರೆ/ಗುಂಟೆ ಸರ್ಕಾರಿ ಜಮೀನು ಒತ್ತುವರಿ ಇದೆ. ವಿವಿಧ ನ್ಯಾಯಾಲಯಗಳಲ್ಲಿರುವ ಪ್ರಕರಣಗಳು, ಅಕ್ರಮ ಸಕ್ರಮ ಯೋಜನೆ ಮತ್ತು ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಿರುವ ಒಟ್ಟು 10,82,752 ಎಕರೆ/ಗುಂಟೆ ಜಮೀನು ಹೊರತುಪಡಿಸಿ, ಉಳಿದಂತೆ 3,89,741 ಎಕರೆ/ಗುಂಟೆ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಬೇಕಾಗಿದ್ದು, ಇದರಲ್ಲಿ 2,73,778 ಎಕರೆ/ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ. ಉಳಿದಂತೆ 1,15,963 ಎಕರೆ/ಗುಂಟೆ ಜಮೀನನ್ನು ಒತ್ತುವರಿ ತೆರವುಗೊಳಿಸಲು ಬಾಕಿ ಇದೆ ಎಂದು ತಿಳಿಸಿದರು.

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಅಕ್ಟೋಬರ್ - 2023ರ ಅಂತ್ಯಕ್ಕೆ ಒಟ್ಟು 21,712 ಪ್ರಕರಣಗಳು ದಾಖಲಾಗಿದ್ದು, ಇತ್ಯರ್ಥಪಡಿಸಲಾಗಿದೆ. ಈ ಪೈಕಿ 16,205 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 5,507 ಪ್ರಕರಣಗಳು ಬಾಕಿ ಇದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳಲ್ಲಿ ಈವರೆಗೂ 75 ಜನರಿಗೆ ಒಂದು ವರ್ಷದಂತೆ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.

ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕಾರ್ಯ ಪಡೆಗಳನ್ನು ರಚಿಸಲಾಗಿದೆ. ಅದರಂತೆ ಎಲ್ಲಾ ಜಿಲ್ಲಾಧಿಕಾರಿಗಳು ಕಾಲಬದ್ಧ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡು, ಒತ್ತುವರಿ ಆಗಿರುವ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಖಾಸಗಿಯವರಿಂದ ಒಟ್ಟು 23,307 ಪ್ರಕರಣಗಳಲ್ಲಿ 51,555-31.01 ಎಕರೆ/ಗುಂಟೆ ಜಮೀನು ಅತಿಕ್ರಮಣಗೊಂಡಿದ್ದು, 12,434 ಪ್ರಕರಣಗಳಲ್ಲಿ 28,264-19.05 ಎಕರೆ/ಗುಂಟೆ ಜಮೀನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ. ಸರ್ಕಾರಿ ಜಮೀನು ಒತ್ತುವರಿ ಮಾಡುವವರಿಗೆ ಸಹಾಯ ಮಾಡುವ ಅಧಿಕಾರಿಗಳ ವಿರುದ್ದ ಎಫ್.ಐ.ಆರ್ ದಾಖಲು ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ವಿಶ್ವಕರ್ಮ ಜನಾಂಗದವರಿಗೆ ಅವಕಾಶ :ಕಳೆದ ಅಧಿವೇಶನದಲ್ಲಿ ನೀಡಿದ ಆಶ್ವಾಸನೆಯಂತೆ, ದೇವಾಲಯಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಒಬ್ಬರು ವಿಶ್ವಕರ್ಮ ಜನಾಂಗದವರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಅಧಿನಿಯಮ 2011ರ ಸೆಕ್ಷನ್ 25ಕ್ಕೆ ಅಗತ್ಯ ತಿದ್ದುಪಡಿ ತರುವ ಸಂಬಂಧ ಕರಡು ತಿದ್ದುಪಡಿ ಕಾನೂನು ಮಸೂದೆಯನ್ನು ಸಿದ್ಧಪಡಿಸಿದ್ದು, ಕಾನೂನು ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಸದಸ್ಯ ಡಾ. ಕೆ. ಪಿ ನಂಜುಂಡಿ ವಿಶ್ವಕರ್ಮ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ರ ಕಲಂ 25 ರಡಿಯಲ್ಲಿ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನಾಗಿ ಒಂದು ದೇವಾಲಯದ ಸಂಬಂಧದಲ್ಲಿ ಪ್ರಧಾನ ಅರ್ಚಕ ಅಥವಾ ಅರ್ಚಕ. ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟಿಗೆ ಸೇರಿದವರ ಪೈಕಿ, ಕೊನೇ ಪಕ್ಷ ಒಬ್ಬರು. ಇಬ್ಬರು ಮಹಿಳೆಯರು. ಸಂಸ್ಥೆಯು ಇರುವ ಸ್ಥಳದಲ್ಲಿ ವಾಸಿಸುತ್ತಿರುವ ವ್ಯಕ್ತಿಗಳ ಪೈಕಿಯಿಂದ ಕೊನೇ ಪಕ್ಷ - ಒಬ್ಬರು- ಸದಸ್ಯರುಗಳನ್ನು ಹೊಂದಿರತಕ್ಕದ್ದು.

ಸಾಮಾನ್ಯ ವರ್ಗಕ್ಕೆ ಸೇರಿದ ಇತರ ನಾಲ್ಕು ಸದಸ್ಯರುಗಳನ್ನು ಹೊಂದಿರತಕ್ಕದ್ದು. ಅಧಿಸೂಚಿತ ಸಂಸ್ಥೆಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ಮೇಲಿನಂತೆ ಸಂದರ್ಭಾನುಸಾರ ರಾಜ್ಯ ಧಾರ್ಮಿಕ ಅಥವಾ ಜಿಲ್ಲಾ ಧಾರ್ಮಿಕ ಪರಿಷತ್ ವತಿಯಿಂದ ಕಾಯ್ದೆಯ ಸೆಕ್ಷನ್ 25 ರಡಿಯಲ್ಲಿ ನೇಮಕ ಮಾಡಲಾಗುತ್ತಿದೆ. ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ಮೇಲ್ಕಂಡಂತೆ ನಿಗಧಿಪಡಿಸಿರುವ ಮೀಸಲಾತಿಯನ್ವಯ ನೇಮಕ ಮಾಡಬೇಕಾಗಿರುತ್ತದೆ. ದೇವಾಲಯಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಒಬ್ಬರು ವಿಶ್ವಕರ್ಮ ಜನಾಂಗದವರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಕಾನೂನು ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಇನ್ನೆರಡು ತಿಂಗಳಿನಲ್ಲಿ ಸರ್ಕಾರಿ ಬಸ್, ಸಿಬ್ಬಂದಿ ಕೊರತೆ ಸಮಸ್ಯೆ ಇತ್ಯರ್ಥ: ರಾಮಲಿಂಗಾರೆಡ್ಡಿ

ABOUT THE AUTHOR

...view details