ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಕೆಲ ವಾರದಿಂದ ಮಳೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಆದರೆ ಕಳೆದ ಮೂರು ದಿನಗಳಿಂದ ಮತ್ತೆ ಮಳೆ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ ಕೃಷ್ಣಾ ನದಿ ನೀರಿನ ಪ್ರಮಾಣದ ಯಥಾಸ್ಥಿತಿ ಇದೆ.
ಹೆಚ್ಚಾದ ಕೃಷ್ಣಾ ನದಿ ನೀರಿನ ಒಳ ಹರಿವು ವೇದ್ಗಂಗಾ ಮತ್ತು ದೂಧ್ಗಂಗಾ ನದಿಗಳ ಒಳಹರಿವು 96,000. ಅದಕ್ಕೂ ಅಧಿಕ ಕ್ಯೂಸೆಕ್‌ಕ್ಕಿಂತ ಹೆಚ್ಚು ಕೃಷ್ಣಾ ನದಿಯ ಒಳ ಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ ಶುಭಾಸ ಸಂಪಗಾಂವಿ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‌ನಿಂದ 82,000 ಕ್ಯೂಸೆಕ್ ನೀರು, ದೂಧ್ಗಂಗಾ ನದಿಯಿಂದ 14,080 ಕ್ಯೂಸೆಕ್ ನೀರು, ಹೀಗೆ ಒಟ್ಟು 96 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಕೊಯ್ನಾ ಜಲಾಶಯದಿಂದ 10,000 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದಾರೆ. ಅದು ಕರ್ನಾಟಕಕ್ಕೆ ಬಂದು ತಲುಪಬೇಕಾದರೆ ಎರಡ್ಮೂರು ದಿನಗಳಾಗಬಹುದು. ಕೊಯ್ನಾ ಜಲಾಶಯ ಪ್ರದೇಶದಲ್ಲಿ ಲಘು ಭೂಕಂಪವಾಗಿದ್ದು, ಕೊಯ್ನಾದಿಂದ ನೀರು ಬೀಡುವ ಸಾಧ್ಯತೆ ಇದೆ. ಇದರಿಂದ ಕೃಷ್ಣಾ ನದಿ ತೀರದ ಜನರಲ್ಲಿ ಆತಂಕ ಹೆಚ್ಚಿದೆ.
ಮಹಾರಾಷ್ಟ್ರದ ಕೊಯ್ನಾದಲ್ಲಿ 136 ಮಿ.ಮೀ ಮಳೆಯಾಗಿದ್ದು, ನವಜಾದಲ್ಲಿ 82 ಮಿ.ಮೀ, ಮಹಾಬಲೇಶ್ವರ - 156 ಮಿ.ಮೀ, ವಾರಣಾ - 140 ಮಿ.ಮೀ, ಕಾಳಮ್ಮವಾಡಿ - 75 ಮಿ.ಮೀ, ರಾಧಾನಗರಿ - 58 ಮಿ.ಮೀ, ಪಾಟಗಾಂವದಲ್ಲಿ 61 ಮಿ.ಮೀ ಮಳೆಯಾದ ವರದಿಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದ ಕೊಯ್ನಾ ಹಾಗೂ ಮಹಾಬಲೇಶ್ವರ ಭಾಗದಲ್ಲಿ ಮಳೆ ಹೆಚ್ಚಾಗಿರುವ ವರದಿಯಾಗಿದೆ.
ಚಿಕ್ಕೋಡಿ ಉಪವಿಭಾಗದ ಚಿಕ್ಕೋಡಿಯಲ್ಲಿ 2.1 ಮಿ.ಮೀ ಮಳೆಯಾದರೆ, ಅಂಕಲಿಯಲ್ಲಿ 6.2 ಮಿ.ಮೀ, ಹಾಗೂ ಸದಲಗಾದಲ್ಲಿ 6.0 ಮಿ.ಮೀ ಮಳೆಯಾಗಿರುವ ವರದಿಯಾಗಿದೆ. ಸದ್ಯ ಕೊಯ್ನಾ ಜಲಾಶಯ ಶೇ. 82, ವಾರಣಾ ಜಲಾಶಯ ಶೇ.89, ರಾಧಾನಗರಿ ಜಲಾಶಯ ಶೇ.100, ಕಣೇರ ಜಲಾಶಯ ಶೇ.89, ಧೂಮ ಜಲಾಶಯ ಶೇ.76, ಪಾಟಗಾಂವ ಶೇ.96 ಧೂದಗಂಗಾ ಶೇ. 91ರಷ್ಟು ತುಂಬಿದೆ ಎಂದು ಚಿಕ್ಕೋಡಿ ತಹಶೀಲ್ದಾರ ಶುಭಾಸ ಸಂಪಗಾಂವಿ ಮಾಹಿತಿ ನೀಡಿದ್ದಾರೆ.