ಕರ್ನಾಟಕ

karnataka

ETV Bharat / state

4 ವರ್ಷದಿಂದ ಸರ್ಕಾರಿ ಶಾಲೆಯಲ್ಲಿ ವಾಸ: ಮಾಜಿ ಡಿಸಿಎಂ ಹುಟ್ಟೂರಿನ ನೆರೆ ಸಂತ್ರಸ್ತರ ಬವಣೆ - ಕೃಷ್ಣಾ ನದಿ ಪ್ರವಾಹ

ಪಿಕೆ ನಾಗನೂರ ಗ್ರಾಮ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹುಟ್ಟೂರು. ಆದರೂ ಇಲ್ಲಿನ ನೆರೆ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

Krishna river flood victims demands Rehabilitation
ಸರ್ಕಾರಿ ಶಾಲೆ ಕಟ್ಟಡದಲ್ಲಿ ವಾಸಿಸುತ್ತಿರುವ ನೆರೆ ಸಂತ್ರಸ್ತರು

By

Published : Nov 28, 2022, 12:29 PM IST

ಅಥಣಿ(ಬೆಳಗಾವಿ): ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ನಾಗನೂರ ಗ್ರಾಮದ 8ಕ್ಕೂ ಹೆಚ್ಚು ನೆರೆ ಸಂತ್ರಸ್ತರ ಕುಟುಂಬಗಳು ಕಳೆದ ನಾಲ್ಕು ವರ್ಷಗಳಿಂದ ಸರ್ಕಾರಿ ಸಮುದಾಯ ಭವನ, ಶಾಲೆ ಕಟ್ಟಡದಲ್ಲಿ ವಾಸವಾಗಿದ್ದು ಪ್ರತಿ ಕ್ಷಣ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಿಕೆ ನಾಗನೂರ ಗ್ರಾಮಸ್ಥರು ಕೃಷ್ಣಾ ನದಿ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ಸೂಕ್ತ ನೆಲೆ ಇಲ್ಲದೇ ಇರುವುದರಿಂದ ಈಗಲೂ ಸರ್ಕಾರಿ ಕಟ್ಟಡದಲ್ಲಿ ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ.

ನೆರೆ ಸಂತ್ರಸ್ತರ ಪುನರ್ವಸತಿಗೆ ಒತ್ತಾಯ

ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆಯಾಗಿರುವ ಪಿಕೆ ನಾಗನೂರ ಗ್ರಾಮಕ್ಕೆ ಅಂದಿನ ಸರ್ಕಾರ 2018ರಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಿ ಕೊಟ್ಯಂತರ ರೂ. ಖರ್ಚು ಮಾಡಿ ರಡ್ಡೇರಹಟ್ಟಿ ಗ್ರಾಮದಲ್ಲಿ 198 ಎಕರೆ ಪ್ರದೇಶದಲ್ಲಿ ಸ್ಥಳ ನಿಗದಿಪಡಿಸಿತ್ತು. ಆದರೆ ಅಂದಿನಿಂದ ಇವತ್ತಿನವರೆಗೂ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಹಕ್ಕು ಪತ್ರ ವಿತರಣೆ ಮಾಡಿಲ್ಲ. ಹೀಗಾಗಿ ತಮ್ಮ ಸ್ಥಳ ಎಲ್ಲಿ ಬರುತ್ತದೆ ಎಂದು ಗೊತ್ತಾಗದೆ ಪರದಾಡುವಂತಾಗಿದೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

2019ರಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಅಥಣಿ ತಾಲೂಕಿನ 17 ಗ್ರಾಮಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದವು. ಇದರಲ್ಲಿ ಪಿಕೆ ನಾಗನೂರ ಗ್ರಾಮಸ್ಥರು ಮನೆ ಮಠ ಕಳೆದುಕೊಂಡು ಸೂಕ್ತವಾದ ನೆಲೆ ಇಲ್ಲದೆ ರಡ್ಡೇರಹಟ್ಟಿ ಗ್ರಾಮದ ಪುನರ್ವಸತಿ ಕೇಂದ್ರದ ಸಮುದಾಯ ಭವನ ಹಾಗೂ ಶಾಲೆಗಳಲ್ಲಿ ವಾಸವಿದ್ದರು. ಈಗಲೂ ಸಹ ಅಲ್ಲಿಯೇ ಉಳಿದಿದ್ದು, ಇದಕ್ಕೆ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದ್ದಾರೆ.

ಪಿಕೆ ನಾಗನೂರ ಗ್ರಾಮ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹುಟ್ಟೂರಾಗಿದ್ದರೂ ಇಲ್ಲಿನ ನೆರೆ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ. ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ನೆರೆ ಸಂತ್ರಸ್ತರ ಸಮಸ್ಯೆ ಕುರಿತು ಜನಪ್ರತಿನಿಧಿಗಳು ಧ್ವನಿಯತ್ತಿ ನಮಗೆ ನ್ಯಾಯ ಕೊಡಿಸಬೇಕೆಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಫಲಾನುಭವಿಗಳಿಗೆ ಹಂಚಿಕೆಯಾಗದ ಮನೆ: ಕೊಡಗು ಸಂತ್ರಸ್ತರ ಆಕ್ರೋಶ

ABOUT THE AUTHOR

...view details