ಚಿಕ್ಕೋಡಿ: ದಿನದಿಂದ ದಿನಕ್ಕೆ ನದಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜನರು ಪ್ರವಾಹಕ್ಕೆ ಹೆದರಿ ಸೂಕ್ತ ಸ್ಥಳಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ಆದರೆ ಈಗಾಗಲೇ ಕೃಷ್ಣಾ ನದಿ ನೀರಿನ ಹರಿವು ಹೆಚ್ಚಾದರೂ ಜೀವದ ಹಂಗನ್ನೂ ತೊರೆದು ಸೇತುವೆಗಳ ಮೂಲಕ ತಮ್ಮ ಮನೆ ಸಾಮಗ್ರಿಗಳನ್ನು ಸ್ಥಳಾಂತರಿಸುತ್ತಿದ್ದಾರೆ. ಸ್ಥಳದಲ್ಲಿ ಅಧಿಕಾರಿಗಳ ನಿಯೋಜನೆಗೊಂಡಿಲ್ಲ. ಹೀಗಾಗಿ ಇಂಗಳಿ ಗ್ರಾಮಸ್ಥರು ಹರಿಯುವ ನದಿಯಲ್ಲಿ ತಮ್ಮ ಅಗತ್ಯ ಸಾಮಗ್ರಿಗಳನ್ನು ಸಾಗಿಸುತ್ತಿದ್ದು, ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ ಎನ್ನುವುದು ಈಗ ಪ್ರಶ್ನೆಯಾಗಿದೆ.
ಕಳೆದ ಬಾರಿ ಪ್ರವಾಹದಲ್ಲಿ ಇಂಗಳಿ ಗ್ರಾಮದ ಯುವಕನೋರ್ವ ನದಿ ಮಧ್ಯದಲ್ಲಿ ಸಿಕ್ಕಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಇದೆಲ್ಲವೂ ಗ್ರಾಮಸ್ಥರಿಗೆ ಗೊತ್ತಿದ್ದರೂ ಸಹ ಜನರು ಮತ್ತೆ ಹರಿಯುವ ನದಿಯಲ್ಲಿ ಬ್ರಿಡ್ಜ್ ದಾಟುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇಲ್ಲಿನ ತಾಲೂಕಾಡಳಿತದ ನಿರ್ಲಕ್ಷ್ಯದಿಂದ ಸ್ಥಳೀಯ ಜನರು ಬೇಕಾಬಿಟ್ಟಿಯಾಗಿ ಹರಿಯುವ ನದಿಯ ಮಧ್ಯದಲ್ಲಿರುವ ಬ್ರಿಡ್ಜ್ ಮೇಲೆಯೇ ಓಡಾಡುತ್ತಿದ್ದಾರೆ.