ಬೆಳಗಾವಿ:ಗೋಕಾಕ ನಗರದಲ್ಲಿ ನಡೆದಿದ್ದ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿದ್ದ ಕಿಂಗ್‌ಪಿನ್ ಸಂಜು ಭಂಡಾರಿ ಸೇರಿದಂತೆ 20 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಜಿಎಸ್ಎಸ್ ಪರೀಕ್ಷಾ ಕೇಂದ್ರದಲ್ಲಿ ಆಗಸ್ಟ್ 7ರಂದು ಕೆಪಿಟಿಸಿಎಲ್ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದ್ದರು. ಇದಾದ ಬಳಿಕ ಆಗಸ್ಟ್ 10 ರಂದು ಪ್ರಕರಣ ಸಂಬಂಧ ಸಿದ್ದಪ್ಪ ಮದಿಹಳ್ಳಿಯನ್ನು ಬಂಧಿಸಿದ್ದರು.
ಬಂಧಿತ ಆರೋಪಿ ಸ್ಮಾರ್ಟ್ ವಾಚ್ ಬಳಸಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದರು. ಸಿದ್ದಪ್ಪ ಅಕ್ರಮ ಎಸಗುವ ದೃಶ್ಯ ಪರೀಕ್ಷಾ ಕೇಂದ್ರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಪ್ರಕರಣ ಬೇಧಿಸಿದ್ದ ಬೆಳಗಾವಿ ಪೊಲೀಸರು, ಬಳಿಕ ಆ. 23ರಂದು 9 ಆರೋಪಿಗಳನ್ನು ಬಂಧಿಸಿದ್ದರು. ಹಂತ ಹಂತವಾಗಿ 20 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಇತ್ತ ಆರೋಪಿಗಳು ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು. ಈಗ ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶ ಜಿ. ರಾಜೀವ್ ಷರತ್ತುಬದ್ದ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
ಓದಿ:ನಿರಂತರ ಮಳೆ.. ಮೈಸೂರು ಅರಮನೆ ಆವರಣದ ಕೋಟೆ ಗೋಡೆ ಕುಸಿತ