ಬೆಳಗಾವಿ: ಆಗಸ್ಟ್ 7ರಂದು ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ ಬಳಸಿ ಅಕ್ರಮ ಎಸಗಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕ ತಾಲೂಕಿನ ನಾಗನೂರ ಗ್ರಾಮದ ಸಿದ್ದಪ್ಪ ಮದಿಹಳ್ಳಿ, ಬೆನಚಿನಮರಡಿ ಗ್ರಾಮದ ಸಿದ್ದಪ್ಪ ಕೊತ್ತಲ, ಮಾಲದಿನ್ನಿ ಗ್ರಾಮದ ರೇಣುಕಾ ಜವಾರಿ, ಸುನೀಲ ಭಂಗಿ, ಸಂತೋಷ ವೀರನಗಡ್ಡಿ, ಬಸವಣ್ಣಿ ಡೊಣವಾಡ, ಗದಗ ಮೂಲದ ಮಾರುತಿ ಸೋನವಣಿ, ಸಮೀತಕುಮಾರ್ ಸೋನವಣಿ ಹಾಗೂ ಅಮರೇಶ ರಾಜೂರ ಬಂಧಿತರು.
ಸ್ಮಾರ್ಟ್ ವಾಚ್ ಬಳಸಿ ಅಕ್ರಮ: ಆಗಸ್ಟ್ 7ರಂದು ನಡೆದಿದ್ದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಗೋಕಾಕ್ನ ಜಿ.ಎಸ್.ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸ್ಮಾರ್ಟ್ ವಾಚ್ ಬಳಸಿ ಅಕ್ರಮ ಎಸಗಿದ ಆರೋಪದಡಿ ಸಿದ್ದಪ್ಪ ಮದಿಹಳ್ಳಿ ಎಂಬ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿ ಸಿದ್ದಪ್ಪ ಮದಿಹಳ್ಳಿ ಸ್ಮಾರ್ಟ್ ವಾಚ್ನಲ್ಲಿ ಪ್ರಶ್ನೆ ಪತ್ರಿಕೆ ಫೋಟೋ ತೆಗೆದು ಟೆಲಿಗ್ರಾಂ ಆ್ಯಪ್ ಮೂಲಕ ಮತ್ತೊಬ್ಬ ಆರೋಪಿ ಸುನೀಲ್ ಭಂಗಿ ಎಂಬುವವರಿಗೆ ರವಾನಿಸಿದ್ದ. ಸಿಸಿ ಕ್ಯಾಮರಾ ದೃಶ್ಯಾವಳಿ ಗಮನಿಸಿ ಅನುಮಾನಗೊಂಡ ಪರೀಕ್ಷಾ ಕೇಂದ್ರದ ಸಿಬ್ಬಂದಿ ಆಗಸ್ಟ್ 9ರಂದು ಗೋಕಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬ್ಲೂ ಟೂತ್ನಲ್ಲಿ ಉತ್ತರ:ಬಳಿಕ ಪೊಲೀಸರು ಸಿದ್ದಪ್ಪ ಮದಿಹಳ್ಳಿಯನ್ನು ಬಂಧಿಸಿದ್ದರು. ಬಳಿಕ ತೀವ್ರ ವಿಚಾರಣೆ ನಡೆಸಿದಾಗ ಪ್ರಶ್ನೆ ಪತ್ರಿಕೆಯನ್ನು ಸುನೀಲ್ ಭಂಗಿ ಎಂಬುವವರಿಗೆ ಕಳುಹಿಸಿದ್ದ ಬಗ್ಗೆ ಪರೀಕ್ಷಾರ್ಥಿ ಬಾಯ್ಬಿಟ್ಟಿದ್ದನಂತೆ. ಈ ಮಾಹಿತಿ ಆಧರಿಸಿ ಹುಕ್ಕೇರಿ ತಾಲೂಕಿನ ಬಿ.ಕೆ.ಶಿರಹಟ್ಟಿ ಗ್ರಾಮದ ತೋಟದ ಮನೆಯ ಮೇಲೆ ಪೊಲೀಸರು ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಸುನೀಲ ಭಂಗಿ ಮನೆಯಲ್ಲಿ ಕುಳಿತು ಬ್ಲೂ ಟೂತ್ನಲ್ಲಿ ಹಲವರಿಗೆ ಉತ್ತರ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ.