ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯಲ್ಲಿ ಅಕ್ರಮ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಕಿಂಗ್‌ಪಿನ್ ಆಗಿರುವ ಸಂಜು ಭಂಡಾರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿ ಆದೇಶ ಹೊರಡಿಸಿದೆ.
ಕಳೆದ ಆಗಸ್ಟ್ 7ರಂದು ರಾಜ್ಯಾದ್ಯಂತ ಕೆಪಿಟಿಸಿಎಲ್ ಕಿರಿಯ ಸಹಾಯಕರ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್ ಪಟ್ಟಣದಲ್ಲಿ ಅಭ್ಯರ್ಥಿಯೊಬ್ಬ ಸ್ಮಾರ್ಟ್ವಾಚ್ ಬಳಸಿ ಪರೀಕ್ಷೆ ಬರೆದು ಸಿಕ್ಕಿಹಾಕಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧ ಈಗಾಗಲೇ ಬೆಳಗಾವಿ ಜಿಲ್ಲಾ ಪೊಲೀಸರು 12ಜನ ಆರೋಪಿಗಳನ್ನ ಬಂಧಸಿ ಜೈಲಿಗಟ್ಟಿದ್ದಾರೆ. ಆದರೆ, ಪ್ರಕರಣ ಕಿಂಗ್ ಪಿನ್ ಆಗಿರುವ ಬೆಳಗಾವಿ ಮೂಲದ ಸಂಜು ಭಂಡಾರಿ ಪೊಲೀಸರು ಕೈಗೆ ಸಿಗದೇ ನಾಪತ್ತೆ ಆಗಿದ್ದಾನೆ.
ತಮ್ಮ ವಕೀಲರ ಮೂಲಕ ಗೋಕಾಕ್ ಪಟ್ಟಣದ 12ನೇ ಹೆಚ್ಚುವರಿ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದನು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ :ಸ್ಮಾರ್ಟ್ ವಾಚ್ ಬಳಸಿ ಕೆಪಿಟಿಸಿಎಲ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಸಿಟಿವಿಯಿಂದ ಕೃತ್ಯ ಬಯಲು
ಕೆಪಿಟಿಸಿಎಲ್ ಕಿಂಗ್ ಪಿನ್ ಸಂಜು ಭಂಡಾರಿ, ಆಗಸ್ಟ್ 7ರಂದು ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಂದ ಹಣ ಪಡೆದು ಅಕ್ರಮ ನಡೆಸಲು ಬ್ಲೂಟೂತ್ ಡಿವೈಸ್ಗಳನ್ನು ನೀಡಿದ್ದನು. ಅಕ್ರಮ ಸಂಬಂಧ ಪರೀಕ್ಷಾರ್ಥಿಗಳು ಸೇರಿ 12 ಜನರನ್ನು ಬಂಧಿಸಲಾಗಿದೆ. ಸಂಜು ಭಂಡಾರಿ ಹೊರರಾಜ್ಯದಲ್ಲಿ ತಲೆಮರಿಸಿಕೊಂಡಿರುವ ಹಿನ್ನೆಲೆ ಆತನ ಶೋಧಕ್ಕೆ ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ಅವರು ಮೂರು ವಿಶೇಷ ತಂಡಗಳ ರಚನೆ ಮಾಡಿದ್ದಾರೆ.