ಬೆಳಗಾವಿ: ಪಿಎಸ್ಐ ನೇಮಕಾತಿ ಹಗರಣದಲ್ಲಿ ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವುದು ಬೆಳಕಿಗೆ ಬಂದ ಕಾರಣ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಒತ್ತಾಯಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಅಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು, ಸರ್ಕಾರ ಅದೇ ಪೊಲೀಸರಿಂದಲೇ ತನಿಖೆ ನಡೆಸುವುದು ಎಷ್ಟರ ಮಟ್ಟಿಗೆ ಸೂಕ್ತವೆಂದು ಅವರು ಪ್ರಶ್ನಿಸಿದ್ದಾರೆ. ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಬಹಳ ಜನ ಪಾಸ್ ಆಗಿದ್ದಾರೆ. ಜೊತೆಗೆ ಬ್ಲೂಟೂತ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಗೊತ್ತಾಗಿದೆ. ಆದ್ದರಿಂದ ಪ್ರಾಮಾಣಿಕ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದರಲ್ಲಿ ಉನ್ನತ ಅಧಿಕಾರಿಗಳು, ಸಚಿವರು, ಶಾಸಕರ ಹೆಸರುಗಳು ಕೇಳಿ ಬರುತ್ತಿವೆ. ಮಾಜಿ ಸಿಎಂ ಮಗನ ಹೆಸರು ಕೂಡ ಕೇಳಿ ಬಂದಿದೆ. ಆದ್ದರಿಂದ ಸೂಕ್ತ ತನಿಖೆ ನಡೆಸಬೇಕು. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರನ್ನು ಕಾಂಗ್ರೆಸ್ನವರು ಮುಚ್ಚಿಡಲು ಆಕೆ ಸಣ್ಣ ಮಗು ಅಲ್ಲ. ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿ ಗುರುತಿಸಿಕೊಂಡವರು ಎಂದರು.