ಬೆಳಗಾವಿ :ಬಸವಣ್ಣನವರ ನಾಡಿನಲ್ಲಿ ಎಲ್ಲ ವರ್ಗದವರನ್ನು ಸೇರಿಸಿಕೊಂಡು ಎಲ್ಲರೂ ಒಂದೇ ಎಂಬ ಸಂದೇಶವನ್ನು ನಾಡಿಗೆ ನೀಡಿದರು. ಆದರೆ, ಅವರ ತತ್ವಕ್ಕೆ ವಿರುದ್ಧವಾಗಿ ಮತಾಂತರ ಕಾನೂನನ್ನು ಬಿಜೆಪಿ ತರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಮತಾಂತರ ನಿಷೇಧ ತಿದ್ದುಪಡಿಕಾಯ್ದೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿರುವುದು.. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಮತಾಂತರ ಕಾಯ್ದೆ ಕುರಿತ ಚರ್ಚೆಯಲ್ಲಿ ನಾನು ಸಹ ಭಾಗವಹಿಸುತ್ತೇನೆ. ವಿರೋಧ ಮಾಡುತ್ತೇನೆ. ಬಸವಣ್ಣನವರ ನಾಡಿನಲ್ಲಿ ಎಲ್ಲ ವರ್ಗದವರನ್ನು ಸೇರಿಸಿಕೊಂಡು ಎಲ್ಲರೂ ಒಂದೇ ಎಂಬ ಸಂದೇಶ ನೀಡಿದರು. ಎಲ್ಲರನ್ನೂ ಸೇರಿಸಿ ಲಿಂಗಾಯತ ಧರ್ಮ ಅಂತಾ ಮಾಡಿ ಎಲ್ಲರೂ ಒಂದೇ ಎನ್ನುವಂತೆ ಮಾಡಿದರು. ಅವರ ತತ್ವಕ್ಕೆ ವಿರುದ್ಧವಾಗಿ ಈ ಕಾನೂನು ಬರುತ್ತಿದೆ.
ಅಂಬೇಡ್ಕರ್ ಸಿದ್ದಾಂತ ಹಾಗೂ ಅವರ ವಿಚಾರಗಳ ವಿರುದ್ಧ ಕಾನೂನು ತರುತ್ತಿದ್ದಾರೆ. ನಿನ್ನೆ ನೀವು ವರದಿ ಮಾಡಿದ್ದಕ್ಕೆ ಇವತ್ತು ನಿಮ್ಮನ್ನೆ ಒಳಗಡೆ ಹೋಗದಂತೆ ಮಾಡಿದ್ದಾರೆ. ಪತ್ರಕರ್ತರನ್ನು ಒಳಗೆ ಬಿಡೋದಿದ್ದಕ್ಕೆ ನಾವು ಗಲಾಟೆ ಮಾಡಿದ್ದೆವು. ಅದ್ದಕ್ಕೆ ಈಗ ನಿಮ್ಮನ್ನು ಒಳಗೆ ಬಿಡುತ್ತೇವಿ ಅಂತಾ ಹೇಳುತ್ತಿದ್ದಾರೆ.
ಇವರಿಗೆ ಬಡವರ ಬಗ್ಗೆ, ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಇವರು ಜನರ ಮಧ್ಯೆ ಮನಸು ಕೆಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಜನರನ್ನು ಒಂದು ಮಾಡಬೇಕು ಅಂತಾ ಇದ್ದೇವಿ. ಇವರು ಜನರನ್ನ ಬೇರೆ ಬೇರೆ ಮಾಡ್ತಿದ್ದಾರೆ ಎಂದರು.
ಇದೇ ವೇಳೆ ಕಾಂಗ್ರೆಸ್‌ನವರು ಇಲ್ಲಿಗೆ ಬರೋದು ಕೇವಲ ಭಾಷಣ ಮಾಡೋಕೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಹೌದು ಕಾಂಗ್ರೆಸ್ ಶಾಸಕರು ವಿಧಾನಸೌಧಕ್ಕೆ ಬರೋದು ಭಾಷಣ ಮಾಡೋದಕ್ಕೆ ಎಂದರು.