ಬೆಳಗಾವಿ :ಹಿಡಕಲ್ ಜಲಾಶಯದ ಮೂಲಕ ಕೃಷ್ಣಾ ನದಿಗೆ ನೀರು ಹರಿಸುವ ನಿರ್ಧಾರ ಕೈಗೊಂಡಿರುವ ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ನಡೆಯನ್ನ ಗೋಕಾಕ್ ಭಾಗದ ರೈತರು ವಿರೋಧಿಸಿದ್ದಾರೆ.
ಹಿಡಕಲ್ ಜಲಾಶಯದ ಮೂಲಕ ಕೃಷ್ಣಾ ನದಿಗೆ ನೀರು ಹರಿಸುವ ನಿರ್ಧಾರ ಅವೈಜ್ಞಾನಿಕ. ಇಂತಹ ತಪ್ಪು ನಿರ್ಧಾರ ಕೈಗೊಂಡಿರುವ ಸಚಿವರ ವಿರುದ್ಧ ಹಲವಾರು ರೈತರು ಅಸಮಾಧಾನ ವ್ಯಕ್ತಪಡಿಸಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಸಚಿವ ಡಿ ಕೆ ಶಿವಕುಮಾರ್ ನಿರ್ಣಯಕ್ಕೆ ರೈತ ಮುಖಂಡರ ಆಕ್ರೋಶ ಪ್ರತಿ ವರ್ಷದಂತೆ ಸರ್ಕಾರ ಮಹಾರಾಷ್ಟ್ರದ ಬಳಿ ನಿಯೋಗ ರಚಿಸಿ ಕೃಷ್ಣಾ ನದಿಗೆ ನೀರು ಬಿಡಿಸುವ ಕಾರ್ಯವಾಗುತಿತ್ತು. ಆದರೆ, ಈ ಬಾರಿ ಒಂದು ತಿಂಗಳಿನಿಂದ ನದಿ ಒಣಗಿದರೂ ಅದರ ಬಗ್ಗೆ ಯಾವ ಅಧಿಕಾರಿಯೂ ಕಾಳಜಿ ವಹಿಸಿಲ್ಲ. ಈಗ ಹಿಡಕಲ್ ಜಲಾಶಯದ ಮೂಲಕ ನೀರು ಹರಿಸುವ ಕಾರ್ಯಕ್ಕೆ ಮುಂದಾಗಿರೋದು ಮಾತ್ರ ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಹಿಡಕಲ್ ಜಲಾಶಯದಿಂದ 94 ಕಿಮೀ ದೂರದ ಕೃಷ್ಣಾ ನದಿಗೆ 1 ಟಿಎಂಸಿ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಹಿಡಕಲ್ ಜಲಾಶಯದಲ್ಲಿ ಕೇವಲ 4 ಟಿಎಂಸಿ ನೀರು ಮಾತ್ರ ಬಾಕಿ ಇದೆ. ಇದರಿಂದ ಗೋಕಾಕ್ ಹಾಗೂ ಘಟಪ್ರಭಾ ಭಾಗದ ಜನರಿಗೆ ನೀರಿನ ಸಮಸ್ಯೆಯಾಗಿದೆ. ಇದನ್ನು ಕೂಡಲೇ ಕೈ ಬಿಡುವಂತೆ ಒತ್ತಾಯಿಸಿದ್ದಾರೆ.