ಚಿಕ್ಕೋಡಿ:ಒಂದೆಡೆ ಬೇಸಿಗೆಯ ತಾಪಮಾನ ಏರುತ್ತಿದ್ದು ನೀರಿನ ಬರ ಆವರಿಸಿಕೊಳ್ಳುತ್ತಿದ್ದರೆ, ಇತ್ತ ಪಕ್ಷಿಗಳಿಗಾಗಿ ಕಾಲೇಜು ವಿದ್ಯಾರ್ಥಿಗಳು ಗಿಡಗಂಟಿಗಳಲ್ಲಿ ನೀರಿಟ್ಟು ಅವುಗಳನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ಧಾರೆ.
ಚಿಕ್ಕೋಡಿಯ ಕೆಎಲ್ಇ ಸಂಸ್ಥೆಯ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಪರಿಸರ ಸ್ನೇಹಿ ಉದ್ಯಾನವನವನ್ನು ಅಭಿವೃದ್ಧಿಪಡಿಸಿ ಜೀವ ಸಂಕುಲಕ್ಕೆ ಅನುಕೂಲ ಮಾಡಲಾಗಿದೆ. ಈ ಕ್ಯಾಂಪಸ್ ಸುಮಾರು ಆರರಿಂದ ಏಳು ಎಕರೆ ಇದ್ದು, ಇಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಬಿಸಿಲಿನಿಂದ ಬಳಲಿ ಬರುವ ಪಕ್ಷಿ ಸಂಕುಲದ ದಾಹ ತಣಿಸಲು ಗಿಡಗಳಲ್ಲಿ ನೀರನ್ನು ಇಟ್ಟು ಮಾನವೀಯತೆ ಮೆರೆದಿದ್ದಾರೆ.
ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರೇರಿತರಾಗಿ ಉರಿ ಬಿಸಿಲಿನಲ್ಲಿ ನೀರಿಗಾಗಿ ಪರದಾಡುತ್ತಿರುವ ಪಕ್ಷಿಗಳಿಗಾಗಿ ನೀರು ತುಂಬಿಡುವ ವ್ಯವಸ್ಥೆ ಮಾಡಿದ್ದಾರೆ.
ಇನ್ನು ಕಾಲೇಜು ಆವರಣದ ಉದ್ಯಾನವನದಲ್ಲಿ ವಿವಿಧ ಬಗೆಯ ಸಾವಿರಾರು ಗಿಡಗಳು ಬೆಳೆದು ನಿಂತಿವೆ. ಇಲ್ಲಿ ಪಕ್ಷಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಬೆಳೆದು ನಿಂತಿರುವ ಉದ್ಯಾನವನದಲ್ಲಿ ಅಚ್ಚುಕಟ್ಟಾದ ಆಸನದ ವ್ಯವಸ್ಥೆಯನ್ನು ಕಲ್ಪಿಸಿದ್ದು, ವಿದ್ಯಾರ್ಥಿಗಳು ಹಸಿರಿನ ಸಿರಿಯನ್ನು ಸವಿಯುತ್ತಾರೆ. ಹಾಗೂ ಕಾಲೇಜಿಗೆ ಬರುವ ಪಾಲಕರು ಒಂದಷ್ಟು ಕಾಲ ಉದ್ಯಾನದಲ್ಲಿ ವಿಶ್ರಾಂತಿ ಪಡೆದು ಹೋಗುತ್ತಾರೆ.
ಇನ್ನು ಈ ಕ್ಯಾಂಪಸ್ ಸುಡು ಬೇಸಿಗೆಯಲ್ಲಿ ಬಾಯಾರಿ ಬರುವ ಪಕ್ಷಿಗಳ ದಾಹ ನೀಗಿಸುತ್ತಿದೆ. ಉದ್ಯಾನವನದಲ್ಲಿ ಇರುವ ಗಿಡಗಳಿಗೆ ನೀರಿನ ಡಬ್ಬಿಗಳನ್ನು ತೂಗು ಬಿಡಲಾಗಿದ್ದು, ಗುಬ್ಬಚ್ಚಿ, ಗಿಳಿ, ಪಾರಿವಾಳ ಹಾಗೂ ಇನ್ನಿತರ ಪಕ್ಷಿಗಳ ದಾಹ ನೀಗಿಲಾಗುತ್ತಿದೆ.
ಇನ್ನು ಈ ಬಗ್ಗೆ ಮಾತನಾಡಿದ ಡಾ. ಪ್ರಸಾದ ರಾಂಪೂರೆ, ಹಾಸ್ಟೆಲ್ಗಳಲ್ಲಿ ತ್ಯಾಜ್ಯದ ನೀರನ್ನು ರೀ ಸೈಕಲ್ ಮಾಡಿ ಕಾಲೇಜ್ ಕ್ಯಾಂಪಸ್ನ ಆವರಣಕ್ಕೆ ಬಿಡುವುದರಿಂದ ಕಾಲೇಜು ಆವರಣ ಎಲ್ಲರ ಕಣ್ಣಿಗೆ ಹಚ್ಚು ಹಸಿರಾಗಿ ಕಾಣುತ್ತಿದೆ. ನಮ್ಮ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ ಪರಿಸರಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದರು.