ಬೆಳಗಾವಿ:''1916ರಲ್ಲಿ ಸಪ್ತಋಷಿಗಳಿಂದ ಸ್ಥಾಪಿತವಾದ ಕೆಎಲ್ಇ ಸಂಸ್ಥೆಯನ್ನು ಕಳೆದ 40 ವರ್ಷಗಳಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಕಾಹೆರ ಕುಲಪತಿ ಡಾ.ಪ್ರಭಾಕರ ಕೋರೆ ಕ್ರಿಯಾಶೀಲ ನಾಯಕತ್ವದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಗುರುತು ಕೆತ್ತಿದೆ. ಇದು ಸಾಮೂಹಿಕ ಪ್ರಯತ್ನದ ಫಲ'' ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಶ್ಲಾಘಿಸಿದರು.
ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕಾಹೆರ), ಡೀಮ್ಡ್ ಟು ಬಿ ಯೂನಿವರ್ಸಿಟಿಯ 13ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿಂದು ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ''ಭಾರತೀಯ ಶಿಕ್ಷಣ ವ್ಯವಸ್ಥೆಯು ಪ್ರಾಚೀನ ಕಾಲದಿಂದಲೂ "ವಸುಧೈವ ಕುಟುಂಬಕಂ" (ವಿಶ್ವವೇ ಒಂದು ಕುಟುಂಬ) ತತ್ವಶಾಸ್ತ್ರದ ಮೇಲೆ ಕೇಂದ್ರೀಕರಿಸಿದ್ದು, ಆಧುನಿಕ ಜ್ಞಾನದ ಜೊತೆಗೆ ಮೌಲ್ಯಗಳನ್ನು ಸಂಯೋಜಿಸುವ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ನೈತಿಕ ಕರ್ತವ್ಯ. ಅದು ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದಲ್ಲದೇ ಇಡೀ ಮಾನವಕುಲಕ್ಕೆ ಒಳ್ಳೆಯದು ಮಾಡುತ್ತದೆ'' ಎಂದರು.
''ಗುಣಮಟ್ಟದ ಶಿಕ್ಷಣ ಮತ್ತು ನೈತಿಕ ಮೌಲ್ಯಗಳಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ. ನಮ್ಮ ದೇಶವು ಅಭಿವೃದ್ಧಿಯ ಪಥದಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ಹೊಸ ಶ್ರೇಷ್ಠ ಭಾರತವನ್ನು ರಚಿಸಲು ಬದ್ಧರಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಗುಣಮಟ್ಟದ ಶಿಕ್ಷಣ ಮತ್ತು ನೈತಿಕ ಅಡಿಪಾಯವು ವೃತ್ತಿ ಜೀವನವನ್ನು ಯಶಸ್ವಿಯಾಗಿಸುತ್ತದೆ. ಜೀವನದ ಹಾದಿಯಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ಪದವಿಯನ್ನು ಪಡೆಯುವದೆಂದರೆ ಶಿಕ್ಷಣವನ್ನು ಪೂರ್ಣಗೊಳಿಸಿದಂತೆ. ಆದರೆ, ಇದು ಜೀವನದ ಮುಂದಿನ ಹಂತದ ಆರಂಭವನ್ನು ಸಹ ಸೂಚಿಸುತ್ತದೆ'' ಎಂದು ಹೇಳಿದರು.
''ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಉತ್ತಮ ಶಿಕ್ಷಣವು ಮನಸ್ಸು, ದೇಹ ಮತ್ತು ಆತ್ಮದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ನಂಬಿದ್ದರು. ನೀವು ಒಬ್ಬ ನಿಪುಣ ವಿಜ್ಞಾನಿ, ವ್ಯವಸ್ಥಾಪಕ ಅಥವಾ ಬರಹಗಾರರಾಗಿರಬಹುದು. ಆದರೆ, ನಿಮ್ಮ ಶಿಕ್ಷಣವು ಉಪಯುಕ್ತವಾಗಿರುತ್ತದೆ. ನೀವು ಅದನ್ನು ಮಾನವೀಯತೆಯ ಕಲ್ಯಾಣಕ್ಕಾಗಿ ಬಳಸಿದಾಗ ಮಾತ್ರ ಸಾರ್ಥಕವಾಗುತ್ತದೆ. ನಮ್ಮ ಜೀವನವು ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ಉಳಿಸುವುದು ಮತ್ತು ಸುಧಾರಿಸುವುದು ನಮ್ಮ ಕರ್ತವ್ಯ. ಪ್ರಕೃತಿಯನ್ನು ಹಸಿರಾಗಿಡೋಣ. ಉತ್ತಮ ಶಿಕ್ಷಣಕ್ಕೆ ಅವಕಾಶ ನೀಡಿದರೆ, ಪ್ರತಿಯೊಬ್ಬರೂ ಅವರ ಕನಸುಗಳನ್ನು ನನಸಾಗಿಸಬಹುದು ಎಂಬ ಉದ್ದೇಶವನ್ನಿಟ್ಟುಕೊಂಡು, ಕೆಎಲ್‌ಇ ಸಂಸ್ಥೆಯು ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರಯತ್ನಿಸುತ್ತಿದೆ. ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿರುವುದು ಇಲ್ಲಿಯ ಶಿಕ್ಷಣದ ಗುಣಮಟ್ಟ ಮತ್ತು ಪ್ರಸ್ತುತತೆ ಪ್ರತಿಬಿಂಬಿಸುತ್ತದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.