ಬೆಳಗಾವಿಗೆ ಆಗಮಿಸಿದ ಕಿತ್ತೂರು ಉತ್ಸವದ ವೀರಜ್ಯೋತಿ ಬೆಳಗಾವಿ:ಅಕ್ಟೋಬರ್ 23ರಿಂದ ಮೂರು ದಿನಗಳ ಕಾಲ ರಾಜ್ಯಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವ ಆಯೋಜಿಸಲಾಗಿದೆ. ಇದೇ 13ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ ವೀರಜ್ಯೋತಿ ರಾಜ್ಯದ ವಿವಿಧೆಡೆ ಸಂಚರಿಸಿ ಇಂದು ಬೆಳಗಾವಿಗೆ ಆಗಮಿಸಿತು. ವೀರಜ್ಯೋತಿಯನ್ನು ಜಿಲ್ಲಾಡಳಿತದಿಂದ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.
ನಗರದ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ವೀರಜ್ಯೋತಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಶಾಸಕರಾದ ಬಾಬಾಸಾಹೇಬ ಪಾಟೀಲ, ಆಸೀಫ್ ಸೇಠ್, ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ್ ರೇಷ್ಮಾ ಪಾಟೀಲ ಸೇರಿ ಇನ್ನಿತರ ಗಣ್ಯರು ಪೂಜೆ ಸಲ್ಲಿಸಿ ಸ್ವಾಗತಿಸಿದರು. ಚನ್ನಮ್ಮಾಜಿ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಗಮನ ಸೆಳೆದ ವಾದ್ಯಮೇಳಗಳು:ವೀರಗಾಸೆ, ಡೊಳ್ಳುಕುಣಿತ ಸೇರಿ ವಿವಿಧ ವಾದ್ಯಮೇಳಗಳು ವೀರಜ್ಯೋತಿ ಸ್ವಾಗತದಲ್ಲಿ ಗಮನ ಸೆಳೆದವು. ಕಲಾವಿದರು ತಮ್ಮ ಅದ್ಭುತ ಕಲೆಯನ್ನು ಪ್ರದರ್ಶಿಸಿ ನೆರೆದಿದ್ದ ಜನರನ್ನು ರಂಜಿಸಿದರು. ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಬೈಲಹೊಂಗಲ ಎಸಿ ಪ್ರಭಾವತಿ ಫಕೀರಪುರ, ಬೆಳಗಾವಿ ಎಸಿ ಶ್ರವಣ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿ ಮತ್ತಿತರರು ಇದ್ದರು.
ಡೊಳ್ಳು ಬಾರಿಸಿದ ಡಿಸಿ, ಶಾಸಕರು:ಶಾಸಕರಾದ ಬಾಬಾಸಾಹೇಬ ಪಾಟೀಲ, ಆಸೀಫ್ ಸೇಠ್, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ್ ರೇಷ್ಮಾ ಪಾಟೀಲ ಡೊಳ್ಳು ಬಾರಿಸಿ ಸಂತಸಪಟ್ಟರು. ಬಳಿಕ ಜ್ಯೋತಿಯನ್ನು ಇಲ್ಲಿಂದ ಚನ್ನಮ್ಮಾಜಿ ತವರೂರು ಕಾಕತಿಗೆ ಬೀಳ್ಕೊಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳ ಮೂಲಕ ಆಗಮಿಸಿರುವ ವೀರಜ್ಯೋತಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಚರಿಸಿ, ಉತ್ಸವದ ದಿನವಾದ 23ರಂದು ಬೆಳಿಗ್ಗೆ ಕಿತ್ತೂರಿಗೆ ಆಗಮಿಸಲಿದೆ.
ಇದನ್ನೂ ಓದಿ:ಅಕ್ಕನ ಮಗನಿಗೆ ಪಟ್ಟ ಕಟ್ಟಿ, ಸ್ವಂತ ಮಗನಿಗೆ ಭೈರವಿ ಕಂಕಣ ತೊಡಿಸಿದ ಮಹಾತ್ಯಾಗಿ ಕಿತ್ತೂರು ರಾಣಿ ಚೆನ್ನಮ್ಮ!
ಬೆಳಗಾವಿಯಲ್ಲಿ ದಾಂಡಿಯಾ ಸಡಗರ:ಬೆಳಗಾವಿಯಲ್ಲಿ ನವರಾತ್ರಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಅದ್ಧೂರಿಯಾಗಿ ದೇವಿಯ ಆರಾಧನೆ ಮಾಡಲಾಗುತ್ತಿದೆ. ಭಕ್ತಿ-ಭಾವದ ಜತೆಗೆ ದಾಂಡಿಯಾ ನೃತ್ಯ ಎಲ್ಲರ ಗಮನ ಸೆಳೆಯುತ್ತಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದ ಮುಂಬೈ, ಪುಣೆ ನಗರಗಳನ್ನು ನೆನಪಿಸುವಂತೆ ಬೆಳಗಾವಿಯಲ್ಲಿ ದಾಂಡಿಯಾ ಆಯೋಜಿಸಲಾಗಿದೆ. ಬೆಳಿಗ್ಗೆ ದುರ್ಗಾಮಾತಾ ದೌಡ್ನಲ್ಲಿ ಹೆಜ್ಜೆ ಹಾಕುವ ಜನ, ಸಾಯಂಕಾಲ ದಾಂಡಿಯಾದಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು.
ಬೆಳಗಾವಿಯ ಪ್ರತಿ ಬಡಾವಣೆ, ಅಪಾರ್ಟ್ಮೆಂಟ್, ಮೈದಾನಗಳು, ಕಲ್ಯಾಣಮಂಟಪಗಳು ಹೀಗೆ ಎಲ್ಲಿ ನೋಡಿದರೂ ದಾಂಡಿಯಾ ನೃತ್ಯ ಆಯೋಜನೆ ಮಾಡಲಾಗಿದೆ. ಚಿಕ್ಕಮಕ್ಕಳು, ಕಾಲೇಜು ಯುವಕ- ಯುವತಿಯರಿಂದ ಹಿಡಿದು ವಯಸ್ಸಾದವರು ದಾಂಡಿಯಾ ಉತ್ಸವದಲ್ಲಿ ಮಿಂದೇಳುತ್ತಿದ್ದಾರೆ. ರಾಣಿ ಚನ್ನಮ್ಮ ನಗರದ ಮೈದಾನದಲ್ಲಿ ಶಾಸಕ ಅಭಯ ಪಾಟೀಲ ಆಯೋಜಿಸಿದ್ದ ದಾಂಡಿಯಾ ನೃತ್ಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಯುವಕ-ಯುವತಿಯರು, ಮಹಿಳೆಯರು, ಪುಟಾಣಿಗಳ ದಂಡೇ ಹರಿದು ಬಂದಿತ್ತು.