ಬೆಳಗಾವಿ:ಸಿರಿಧಾನ್ಯಗಳಲ್ಲಿ ತಯಾರಿಸಿರುವ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಅಶ್ವಾರೂಢ ಮೂರ್ತಿ ಕಿತ್ತೂರು ಉತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ. ತರಕಾರಿ, ಹೂವುಗಳಿಂದ ತಯಾರಿಸಿದ ನಾನಾ ರೀತಿಯ ಕಲಾಕೃತಿಗಳು ಜನರ ಕುತೂಹಲ ಕೆರಳಿಸಿವೆ. ಸಿರಿಧಾನ್ಯಗಳಾದ ಜೋಳ, ಸಜ್ಜೆ, ನವನೆ, ರಾಗಿ, ಚನ್ನಂಗಿ ಬೇಳೆಗಳನ್ನು ಬಳಸಿ ತಯಾರಿಸಿರುವ 6.5 ಅಡಿ ಎತ್ತರದ ಚನ್ನಮ್ಮಾಜಿ ವಿಗ್ರಹವನ್ನು ಕಲಾವಿದ ಶಿವಲಿಂಗಪ್ಪ ಬಡಿಗೇರ ರಚಿಸಿದ್ದಾರೆ.
ಕಲ್ಲಂಗಡಿಯಲ್ಲಿ ಮಹನೀಯರ ಚಿತ್ರಗಳು: ಕಲ್ಲಂಗಡಿ ಹಣ್ಣಿನಲ್ಲಿ ಅರಳಿರುವ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಡಾ. ರಾಜ್‌ಕುಮಾರ್, ಡಾ.ಪುನೀತ್ ರಾಜ್‌ಕುಮಾರ್, ಕಾಂತಾರ ಚಿತ್ರಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತಿವೆ. ಕುಂಬಳಕಾಯಿಯಲ್ಲಿ ಕೆತ್ತಿದ ವಿವಿಧ ಕಲಾಕೃತಿಗಳು, ಬದನೆ, ಮೂಲಂಗಿ, ಗಜ್ಜರಿ, ಸೌತೆಕಾಯಿ, ಅಲಂಕಾರಿಕ ಅಸ್ಪರಾಗಸ್ ಬಳ್ಳಿಯಿಂದ ರಚನೆಯಾದ ನವಿಲು, ಸೋರೆಕಾಯಿ ಮತ್ತು ಹಾಗಲ ಕಾಯಿಯಿಂದ ತಯಾರಿಸಿರುವ ಮೊಸಳೆ ಕಲಾಕೃತಿಗಳು ವಿಶೇಷವಾಗಿವೆ.
ಜರ್ಬೆರಾ, ಬಟನ್ ರೋಜ್, ಕಾರ್ನೇಶನ್ ಹೂವುಗಳಿಂದ ತಯಾರಿಸಿರುವ ಭೂಮಂಡಲದ ಚಿತ್ರವನ್ನು ಇಲ್ಲಿ ನೋಡಬಹುದು. ಸೇವಂತಿ, ಬಟನ್ ರೋಜ್ ಹೂವುಗಳಿಂದ ಕಪ್ಪು ಮತ್ತು ಸಾಸರ್ ರಚಿಸಲಾಗಿದೆ. ಒಂದು ಕಪ್ಪಿನಲ್ಲಿ ಹಾಲು ಮತ್ತೊಂದು ಕಪ್ಪಿನಲ್ಲಿ ಕಾಫಿ ಸುರಿಯುವಂತೆ ತಯಾರಿಸಲಾಗಿದೆ. ಥರ್ಮಾಕೋಲ್ನಿಂದ ಮತ್ಸ್ಯ ಕನ್ಯೆಯ ಪ್ರತಿರೂಪ ನಿರ್ಮಿಸಲಾಗಿದೆ. ಸೇವಂತಿ, ಆರ್ಕಿಡ್, ಆಂಥೂರಿಯಮ್ ಹೂವುಗಳನ್ನು ಇದಕ್ಕಾಗಿ ಬಳಸಲಾಗಿದೆ. ನಮ್ಮ ಹೆಮ್ಮೆಯ ಕರ್ನಾಟಕ ಘೋಷವಾಕ್ಯದೊಂದಿಗೆ ರೋಜ್ ಬಟನ್ ಮತ್ತು ಹಳದಿ ಸೇವಂತಿ ಹೂವುಗಳಿಂದ ಕರ್ನಾಟಕದ ಭೂಪಟ ರಚಿಸಿದ್ದು ಆಕರ್ಷಣೀಯವಾಗಿದೆ.