ಬೆಳಗಾವಿ: ಭಾರತದಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ರಾಣಿ ಚೆನ್ನಮ್ಮಳಿಗೆ ಸಿಗಬೇಕಾದ ಮಾನ್ಯತೆ ದೊರಕಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಬೇಸರ ವ್ಯಕ್ತಪಡಿಸಿದರು.
ಕಿತ್ತೂರು ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚೆನ್ನಮ್ಮಗೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಸಿಕ್ಕಿಲ್ಲ. ಅವರಿಗೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಗುವ ಕೆಲಸ ರಾಜ್ಯದಿಂದಲೇ ಆಗಬೇಕು ಎಂದರು. ಇದೇ ವೇಳೆ, ಕಿತ್ತೂರು ಉತ್ಸವ ರಾಜ್ಯಮಟ್ಟದ ಉತ್ಸವವಾಗಿ ಮಾರ್ಪಾಡಾಗಲಿದೆ. ಇದರಿಂದ ಉತ್ಸವಕ್ಕೂ ಹೆಚ್ಚಿನ ಅನುದಾನ ಬರಲಿದೆ. ಈ ಅನುದಾನ ಬಳಸಿ ಉತ್ಸವಕ್ಕೂ ಮುನ್ನ ಪ್ರಬಂಧ ಸ್ಪರ್ಧೆ ಆಯೋಜಿಸಬೇಕು. ಆಗ ಮಾತ್ರ ಚೆನ್ನಮ್ಮಳ ಸಾಹಸ ಎಲ್ಲರಿಗೂ ತಿಳಿಸಲು ಸಾಧ್ಯ ಎಂದು ತಿಳಿಸಿದರು.
ಧಾರವಾಡ-ಬೆಳಗಾವಿ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರದ ಅನುಮೋದನೆ ಸಿಕ್ಕಿದೆ. ರಾಜ್ಯ ಸರ್ಕಾರ ತಕ್ಷಣವೇ ಭೂಸ್ವಾಧೀನ ಕಾರ್ಯ ಆರಂಭಿಸಬೇಕು. ಆಗ ಮಾತ್ರ ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳ್ಳಲು ಸಾಧ್ಯವಾಗುತ್ತದೆ. ಈ ಯೋಜನೆ ಜಾರಿಯಾದ್ರೆ ಆರು ಗಂಟೆಯಲ್ಲಿ ಇಲ್ಲಿಂದ ಬೆಂಗಳೂರಿಗೆ ತಲುಪಬಹುದು ಎಂದರು.
ನಂತರ ಮಾತನಾಡಿದ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ದೇಶದಲ್ಲಿ ಸ್ವಾತಂತ್ರ್ಯದ ಕಹಳೆ ಊದಿದ ಕಿತ್ತೂರು ಉತ್ಸವದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವ ಎಂದು ಘೋಷಿಸಬೇಕು, ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳನ್ನು ಕಿತ್ತೂರಿನಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಜೊತೆಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ಅನುದಾನ ಒದಗಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.