ಬೆಳಗಾವಿ: ಚನ್ನಮ್ಮನ ಉತ್ಸವಕ್ಕೆ ಜನಸಾಗರವೇ ಕಿತ್ತೂರಿಗೆ ಹರಿದು ಬಂದಿದೆ. ಕಲರ್‌ಫುಲ್ ಲೈಟಿಂಗ್ಸ್‌ನಿಂದ ಕಂಗೊಳಿಸುತ್ತಿದ್ದ ಕೋಟೆಯಲ್ಲಿ ಜನರು ಸೆಲ್ಫಿ ಫೋಟೋ ತೆಗೆಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಉತ್ಸವಕ್ಕೆ ಬಂದವರು ಕೋಟೆ ಅಭಿವೃದ್ಧಿಯಾಗಿ, ಪ್ರಸಿದ್ಧ ಪ್ರವಾಸಿ ತಾಣವಾಗಬೇಕು, ದಸರಾ ಮಾದರಿಯಲ್ಲಿ ಕಿತ್ತೂರು ಉತ್ಸವ ಜರುಗಬೇಕು ಎಂದು ಆಶಿಸಿದರು.
ವೀರರಾಣಿ ಚನ್ನಮ್ಮಾಜಿ ಆಳಿದ ಕೋಟೆಯಲ್ಲಿ ಯುವಕ, ಯುವತಿಯರು, ಚಿಕ್ಕ ಮಕ್ಕಳು, ಮಹಿಳೆಯರು ಸೇರಿ ಇಡೀ ಕುಟುಂಬಸ್ಥರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ವಸ್ತು ಪ್ರದರ್ಶನದಲ್ಲಿ ಮಾರಾಟಕ್ಕೆ ಇಟ್ಟಿರುವ ವಿವಿಧ ವಸ್ತುಗಳ ಖರೀದಿ ಭರಾಟೆ ಕೂಡ ಜೋರಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ ಸುಂದರ ಕಲಾಕೃತಿಗಳನ್ನು ಕಣ್ತುಂಬಿಕೊಂಡರು. ತೊಟ್ಟಿಲು ಆಟ, ಉಗಿ ಬಂಡಿ ಸೇರಿ ಇನ್ನಿತರ ಆಟಗಳು ಮಕ್ಕಳನ್ನು ಆಕರ್ಷಿಸಿದವು.
ಯುವತಿ ರಾಣಿ ಈಟಿವಿ ಭಾರತ್‌ನೊಂದಿಗೆ ಮಾತನಾಡಿ, "ರಾಣಿ ಚನ್ನಮ್ಮ, ಕಿತ್ತೂರು ಎಂದರೆ ಇಡೀ ನಾಡಿಗೆ ಹೆಮ್ಮೆ. ಇಂತಹ ನಾಡಿನ ಇತಿಹಾಸ ಅಜರಾಮರಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಕೋಟೆ ಅಭಿವೃದ್ಧಿಪಡಿಸಿದರೆ ಬಹಳಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಉತ್ಸವ ಮೈಸೂರು ದಸರಾ ಮಾದರಿಯಲ್ಲಿ ಆಗಬೇಕು. ಆ ನಿಟ್ಟಿನಲ್ಲಿ ರಾಜಕಾರಣಿಗಳು ಯೋಚಿಸಬೇಕು. ಸಿನಿಮಾ ತಾರೆಯರು ತಾವೇ ಸ್ವಯಂ ಅಭಿಮಾನದಿಂದ ಉತ್ಸವಕ್ಕೆ ಬರಬೇಕು" ಎಂದು ಹೇಳಿದರು.