ಕಿತ್ತೂರು ಉತ್ಸವದಲ್ಲಿ 'ಚಿಗಳೆ' ಬೆಳಗಾವಿ:ಚೆನ್ನಮ್ಮನ ಕಿತ್ತೂರು ಉತ್ಸವ ಇಂದಿನಿಂದ ಆರಂಭವಾಗಿದ್ದು, ಮೊದಲ ದಿನ ಜನಸಾಗರ ಹರಿದುಬಂದಿತ್ತು. ವಸ್ತು ಪ್ರದರ್ಶನ ಮಳಿಗೆಯೊಂದರಲ್ಲಿ ಪ್ರದರ್ಶನಕ್ಕಿಟ್ಟ 'ಚಿಗಳಿ' ತಿನ್ನಲು ಜನ ಮುಗಿ ಬಿದ್ದು ಬಾಯಿ ಚಪ್ಪರಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ 'ಚಿಗಳಿ' ಫುಲ್ ಫೇಮಸ್ಸು. ಹುಣಸೆ ಹಣ್ಣು, ಬೆಲ್ಲ, ಉಪ್ಪು, ಖಾರ ಮಿಶ್ರಣ ಮಾಡಿ ತಯಾರಿಸುವ ಚಿಗಳಿ ನೋಡಿದರೆ ಎಂಥವರ ಬಾಯಲ್ಲೂ ನೀರು ಬರುತ್ತದೆ. ಅಂತಹ ರುಚಿಕರ 'ಚಿಗಳಿ' ಈ ಬಾರಿಯ ಕಿತ್ತೂರು ಉತ್ಸವದ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಮಾರಾಟವಾಗುತ್ತಿದೆ.
ಬೈಲಹೊಂಗಲದ ವಕ್ರತುಂಡ ಇನೊವೇಟಿವ್ ಪ್ರೊಡಕ್ಟ್ಸ್ ಕಂಪನಿ ಮಾಲೀಕ ಗಿರೀಶ ಹಲಸಗಿ ವಿಶಿಷ್ಟ ಚಿಗಳಿ ತಿನಿಸು ಮಾರಾಟ ಮಾಡುತ್ತಿದ್ದಾರೆ. ಇವರಲ್ಲಿ 10, 25, 50, 250 ರೂ. ದರದಲ್ಲಿ ಚಿಗಳೆ ಲಭ್ಯವಿದೆ.
ಈಟಿವಿ ಭಾರತ್ ಜತೆ ಮಾತನಾಡಿದ ಗಿರೀಶ ಹಲಸಗಿ, "6 ವರ್ಷ ಸಂಶೋಧನೆ ಮಾಡಿ ಚಿಗಳಿ ತಯಾರಿಸುವ ಒಂದು ಹೊಸ ಪ್ರೊಸೆಸ್ ಕಂಡುಹಿಡಿದಿದ್ದೇನೆ. ನಿರಂತರ ಪ್ರಯತ್ನದ ಫಲವಾಗಿ ಎಫ್.ಎಸ್.ಎಸ್.ಐ. ಪರವಾನಗಿ ಪಡೆದಿದ್ದೇನೆ. ದೆಹಲಿಯ ಇಂಟೆಲೆಕ್ಚುವಲ್ ಪ್ರಾಪರ್ಟಿ ಇಲಾಖೆಗೆ ಚಿಗಳಿ ಪೆಂಟೆಂಟ್ಗಾಗಿ ಪ್ರಸ್ತಾವನೆ ಕಳುಹಿಸಿ ಎರಡು ವರ್ಷವಾಗಿದೆ. ಮೊದಲ ಪರೀಕ್ಷಾ ವರದಿ ಬಂದಿದೆ. ಮುಂದಿನ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರವೇ ಪೇಟೆಂಟ್ ಬರುವ ನಿರೀಕ್ಷೆ ಇದೆ" ಎಂದು ತಿಳಿಸಿದರು.
ಅಂದು ಬಿಇ ಟಾಪರ್, ಇಂದು ಚಿಗಳಿ ತಯಾರಕ:ಗಿರೀಶ ಹಲಸಗಿ ಬಿಇ ಟಾಪರ್. ದೇಶ, ವಿದೇಶಗಳಲ್ಲಿ ಕಂಪನಿಗಳಿಂದ ಕೋಟಿ ಕೋಟಿ ರೂಪಾಯಿಯ ಕೆಲಸದ ಆಫರ್ ಇದ್ದರೂ, ಆ ಕಡೆ ಮನಸ್ಸು ಮಾಡದೇ ಇದ್ದ ಊರಲ್ಲೇ ಸ್ವಯಂ ಉದ್ಯೋಗ ಮಾಡಬೇಕೆಂದು ನಿಶ್ಚಯಿಸಿ ಚಿಗಳೆ ತಯಾರಿಸುವ ಉದ್ಯಮ ಆರಂಭಿಸಿದ್ದಾರೆ. ಇವರು ತಯಾರಿಸುವ ಚಿಗಳೆ ಇದೀಗ ವಿದೇಶದಲ್ಲೂ ಫೇಮಸ್ಸಾಗಿದೆ. ಅಮೆರಿಕ, ಇಟಲಿ, ರಷ್ಯಾ, ಕೆನಡಾ, ದುಬೈ, ಜರ್ಮನಿ, ಶ್ರೀಲಂಕಾ ಸೇರಿ 14 ದೇಶಗಳಿಗೆ ರಫ್ತಾಗುತ್ತದೆ.
ಚಿಗಳಿ- ಪ್ರಯೋಜನಗಳೇನು?:ಚಿಗಳೆ ತಿನ್ನುವುದರಿಂದ ಪಚನ ಕ್ರಿಯೆ ಹಾಗೂ ಹಸಿವು ವೃದ್ಧಿಸುತ್ತದೆ. ಮಲಬದ್ಧತೆ ನಿವಾರಣೆ, ರೋಗ ನಿರೋಧಕ ಶಕ್ತಿಯೂ ಹೆಚ್ಚಿಸುತ್ತದೆ. ರಕ್ತ ಶುದ್ಧಿ ಆಗುತ್ತದೆ. ಲಿವರ್ ರಕ್ಷಣೆ ಮತ್ತು ಕಾಮಾಲೆ ನಿವಾರಣೆಯಲ್ಲಿ ಪರಿಣಾಮಕಾರಿ. ಬೊಜ್ಜು ಕರಗಿಸಿ, ತೂಕ ಕಡಿಮೆ ಮಾಡುತ್ತದೆ. ಹಾಗಾಗಿ, ಆರೋಗ್ಯಕ್ಕೆ ಪೂರಕವಾಗಿರುವ ನಮ್ಮ ಚಿಗಳೆ ತಿನ್ನಲು ಜನ ಹುಡುಕಿಬರುತ್ತಾರೆ. ಅತ್ಯಂತ ವಿಶಿಷ್ಟವಾಗಿ ಚಿಗಳೆ ಪಾಕೆಟ್ ಮಾಡಿದ್ದು, ಚೌಕಾಶಿ ಮಾಡದೇ ಚಿಗಳೆ ಖರೀದಿಸಿ, ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ದೇಶಿ ಉತ್ಪನ್ನ ಉಳಿಸಿ, ಬೆಳೆಸುವಂತೆ ಗಿರೀಶ ಹಲಸಗಿ ಮನವಿ ಮಾಡಿದರು.
ಬೈಲಹೊಂಗಲದಿಂದ ಉತ್ಸವಕ್ಕೆ ಬಂದಿದ್ದ ನಾಗವೇಣಿ ಎಂಬವರು ಮಾತನಾಡಿ, "ಚಿಗಳೆ ನೋಡಿ ನಮ್ಮ ಬಾಲ್ಯದ ದಿನಗಳು ನೆನಪಿಗೆ ಬಂದವು. ನಮ್ಮ ಅಜ್ಜಿ ಚಿಗಳೆ ಕುಟ್ಟಿ ನಮಗೆ ಕೊಡುತ್ತಿದ್ದರು. ಅದೇ ರೀತಿ ಇದು ಸೇಮ್ ಟೇಸ್ಟ್ ಇದೆ" ಎಂದರು.
ಇದನ್ನೂ ಓದಿ:ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ: ಮೆರವಣಿಗೆಗೆ ಕಲಾ ತಂಡಗಳ ಮೆರುಗು