ಬೆಳಗಾವಿ: ಸಿಗರೇಟ್ ಹಚ್ಚಲು ಬೆಂಕಿ ಪೊಟ್ಟಣ ಕೇಳಿದ್ದ ಲಾರಿ ಕ್ಲೀನರನನ್ನೇ ಮೂವರು ಸೇರಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ನಾಕಾ ಬಳಿ ಜರುಗಿದೆ.
ಕೇವಲ ಬೆಂಕಿಪೊಟ್ಟಣ ಕೇಳಿದ್ದಕ್ಕೆ ಲಾರಿ ಕ್ಲೀನರ್ ಬರ್ಬರ ಕೊಲೆ - ಬೆಳಗಾವಿಯಲ್ಲಿ ಲಾರಿ ಕ್ಲೀನರ್ ಕೊಲೆ
ಲಾರಿ ಕ್ಲೀನರ್ ಒಬ್ಬ ತನ್ನ ಸಮೀಪದಲ್ಲೇ ಇದ್ದ ಮೂವರ ಬಳಿ ಬೆಂಕಿ ಪೊಟ್ಟಣ ಕೇಳಲು ಹೋಗಿ ಹತ್ಯೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಮಹಮ್ಮದ್ ಶಫೀವುಲ್ಲಾ ಕೊಲೆಯಾದವ. ನಿನ್ನೆ ತಡರಾತ್ರಿ ಮಹಮ್ಮದ್ ಶಫೀವುಲ್ಲಾ ಚಿತ್ರದುರ್ಗದಿಂದ ಬೆಳಗಾವಿಗೆ ಆಗಮಿಸಿದ್ದನು. ತನ್ನ ಸಮೀಪದಲ್ಲಿದ್ದ ಮೂವರ ಬಳಿ ಹೋಗಿರುವ ಮೊಹಮ್ಮದ್, ಬೆಂಕಿಪೊಟ್ಟಣ ಕೇಳಿದ್ದಾನೆ. ನಶೆಯಲ್ಲಿದ್ದ ಮೂವರು ಆಕ್ರೋಶಗೊಂಡು ಕ್ಲೀನರ್ ಜತೆಗೆ ಜಗಳಕ್ಕೆ ನಿಂತಿದ್ದಾರೆ.
ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ರಾಜು ಲೋಕರೆ ಎಂಬಾತ ಕ್ಲೀನರ್ ಮೊಹಮ್ಮದ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತನ ತಲೆಯನ್ನು ಮಣ್ಣಲ್ಲಿ ಹೂತು ಹಾಕಿದ್ದಾನೆ. ಕೊಲೆ ಮಾಡಿರುವ ಮೂವರು ನಶೆ ಇಳಿಯುವವರೆಗೆ ಹೆಣದ ಬಳಿಯೇ ಇದ್ದರು ಎಂದು ತಿಳಿದು ಬಂದಿದೆ. ಇನ್ನು ನಶೆ ಇಳಿದ ಬಳಿಕ ಆರೋಪಿ ರಾಜು ಲೋಕರೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಶಹಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.