ಕರ್ನಾಟಕ

karnataka

ETV Bharat / state

ಬಾಕಿ ಬಿಲ್ ಕೊಡಿ ಇಲ್ಲ ವಿಷ ಕೊಡಿ: ಸರ್ಕಾರಕ್ಕೆ ಕೆಂಪಣ್ಣ ಖಡಕ್ ಎಚ್ಚರಿಕೆ - ಹಣಕಾಸು ಇಲಾಖೆ

ಬಾಕಿ ಬಿಲ್ ಕೊಡಿ ಇಲ್ಲವೇ ವಿಷ ಕೊಡಿ ಎಂದು ಸರ್ಕಾರಿ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸರ್ಕಾರಿ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ
ಸರ್ಕಾರಿ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ

By ETV Bharat Karnataka Team

Published : Dec 14, 2023, 7:56 PM IST

Updated : Dec 14, 2023, 8:22 PM IST

ಸಚಿವ ಸತೀಶ್​ ಜಾರಕಿಹೊಳಿ

ಬೆಳಗಾವಿ :ಪೂರ್ಣಗೊಂಡ ಕಾಮಗಾರಿಗಳ ಬಾಕಿ ಬಿಲ್ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಗುತ್ತಿಗೆದಾರರು‌ ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್​ನಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಸರ್ಕಾರಿ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ಬಾಕಿ ಬಿಲ್ ಕೊಡಿ ಇಲ್ಲವೇ ವಿಷ ಕೊಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳ ಬಿಲ್ ಕಳೆದ ಮೂರು ವರ್ಷಗಳಿಂದ ಪಾವತಿಯಾಗಿಲ್ಲ. ಹಣ ಹಾಕಿ ಕಾಮಗಾರಿ ಮಾಡಿ ಮುಗಿಸಿದ್ದು, ಬಿಲ್ ಬಾರದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಕೆಲವೊಂದು ಗುತ್ತಿಗೆದಾರರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು.

ಅನಗತ್ಯ ಅರ್ಹತಾ ಮಾನದಂಡಗಳು ಹಾಗೂ ನಿಯಮಗಳನ್ನು ಹೇರುವ ಮೂಲಕ ಸ್ಥಳೀಯ ಗುತ್ತಿಗೆದಾರರನ್ನು ಅನರ್ಹಗೊಳಿಸುವ ಹುನ್ನಾರ ನಡೆಸಲಾಗಿದೆ. ಅಲ್ಲದೇ ಬೇರೆ ರಾಜ್ಯದ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಲವಾರು ಕಾಮಗಾರಿಗಳನ್ನು ಒಗ್ಗೂಡಿಸಿ, ಪ್ಯಾಕೇಜ್ ಪದ್ಧತಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ‌. ಇದನ್ನು ಹಿಂಪಡೆದು ಸಣ್ಣ ಮೊತ್ತದ ಕಾಮಗಾರಿ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಆರಂಭದಲ್ಲಿ ಸ್ಥಳಕ್ಕೆ ಭೇಟಿ‌ ನೀಡಿದ ಕಾರ್ಮಿಕ ಸಚಿವ ಸಂತೋಷ ಲಾಡ್​ ಗುತ್ತಿಗೆದಾರರ ಸಮಸ್ಯೆ ಆಲಿಸಿದರು.

ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಅಂತಿಮವಾಗಿ ಆಗಮಿಸಿದ ಸಚಿವ ಸತೀಶ ಜಾರಕಿಹೊಳಿ ಅವರ ಮುಂದೆ ತಮ್ಮ ಅಳಲು ತೋಡಿಕೊಂಡ ಕೆಂಪಣ್ಣ ಅವರು, ಡಿ. 31ರ ಬಳಿಕ ಬಾಕಿ‌ ಬಿಲ್ ಕ್ಲೀಯರ್ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಕಾಮಗಾರಿ ವಿಳಂಬವಾದರೆ ನಮಗೆ ಸರ್ಕಾರ ದಂಡ ವಿಧಿಸುತ್ತದೆ.‌ ನಮಗೆ‌ ಮೂರು‌ ವರ್ಷ ಬಾಕಿ ಬಿಲ್ ಬಂದಿಲ್ಲ. ಇದಕ್ಕೆ ಸರ್ಕಾರ ಎಷ್ಟು ದಂಡ‌ ನಮಗೆ ಕಟ್ಟಬೇಕು? ಎಂದು ಪ್ರಶ್ನಿಸಿದರು. ಇನ್ನು ಬಾಕಿ‌ ಬಿಲ್ ಕೊಡಿ, ಇಲ್ಲವೇ ನಮಗೆ ವಿಷ ಕೊಟ್ಟು‌ ಬಿಡಿ ಎಂದು ಎಚ್ಚರಿಸಿದರು.

ಬಜೆಟ್​ನಲ್ಲಿ ಸಮಸ್ಯೆ ಪರಿಹರಿಸುತ್ತೇವೆ: ಬಳಿಕ ಮಾತನಾಡಿದ ಸಚಿವ ಸತೀಶ್​ ಜಾರಕಿಹೊಳಿ, ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈಗಾಗಲೇ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಮಾಡಿದ್ದೇವೆ. ಈಗ ಮತ್ತೊಮ್ಮೆ ಬುಧವಾರ ನಿಮಗೆ ಸಮಯ ಕೊಡುತ್ತೇವೆ. ಅಂದು ಸಭೆ ಮಾಡಿ‌ ಒಂದೊಂದೇ ಸಮಸ್ಯೆ ಬಗೆಹರಿಸೋಣ. ಪ್ಯಾಕೇಜ್ ಟೆಂಡರ್​ಗೆ ಮೊದಲೇ ನಮ್ಮ‌ ವಿರೋಧವಿದೆ. ಇನ್ನು ಬಾಕಿ ಬಿಲ್ ಬಿಡುಗಡೆ ಆಗದಿರುವುದಕ್ಕೆ ನಿಮಗೂ ಕಾರಣ ಗೊತ್ತಿದೆ. 100 ರೂ. ಕಾಮಗಾರಿಯನ್ನು 300 ರೂ.ಗೆ ನೀಡಿದ್ದಾರೆ. ಮುಂದಿನ ಬಜೆಟ್​ನಲ್ಲಿ ಅನುದಾನ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ. 4 ಸಾವಿರ ಕೋಟಿ ಕಾಮಗಾರಿಗೆ ಅನುದಾನ ಕೊಟ್ಟಿದ್ದಾರೆ. ಹೀಗಾಗಿ ಸಮಸ್ಯೆ ಆಗುತ್ತಿದೆ. ಸರ್ಕಾರ ಹಣ ಕೊಡುತ್ತದೆ ಎಂಬ ಭರವಸೆ ಮೇಲೆ ನೀವು ಕೆಲಸ ಮಾಡಿದ್ದೀರಿ. ಹಣಕಾಸು ಇಲಾಖೆಯಿಂದ 1500 ಕೋಟಿ ಮಾತ್ರ ಬರುತ್ತಿದೆ. ಮುಂದಿನ ಬಜೆಟ್​ನಲ್ಲಿ ಸಮಸ್ಯೆ ಪರಿಹರಿಸುತ್ತೇವೆ ಎಂದರು.

ಇದನ್ನೂ ಓದಿ :’ಭ್ರಷ್ಟಾಚಾರ ಇದೆ, ಇಲ್ಲ ಎಂದರೆ ನನ್ನಂತಹ ಮೂರ್ಖ ಇನ್ನೊಬ್ಬನಿಲ್ಲ‘: ಡಿ.ಕೆಂಪಣ್ಣ

Last Updated : Dec 14, 2023, 8:22 PM IST

ABOUT THE AUTHOR

...view details