ಬೆಳಗಾವಿ: ನಾವು ಸಂಗೊಳ್ಳಿ ರಾಯಣ್ಣ ಆಗದಿದ್ದರೂ ಪರವಾಗಿಲ್ಲ. ಆದರೆ, ಜಾತಿಧರ್ಮ ಬದಿಗಿಟ್ಟು ಅವರ ದೇಶಪ್ರೇಮವನ್ನಾದರೂ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು. ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಯಣ್ಣನ ಹುಟ್ಟೂರು ಸಂಗೊಳ್ಳಿ ಹಾಗೂ ನೇಣುಗಂಬಕ್ಕೆ ಏರಿಸಿದ ನಂದಗಡ ಅಭಿವೃದ್ಧಿಗೆ 2016 - 17ನೇ ಸಾಲಿನಲ್ಲಿ ಪ್ರಾಧಿಕಾರ ರಚಿಸಲಾಗಿದೆ. ರಾಯಣ್ಣನ ಹೆಸರು ಚಿರಸ್ಥಾಯಿಯಾಗಿಸಲು ಸಂಗೊಳ್ಳಿ ಮತ್ತು ನಂದಗಡ ಅಭಿವೃದ್ಧಿಗೆ ರಚಿಸಲಾದ ಪ್ರಾಧಿಕಾರಕ್ಕೆ ನೂರು ಎಕರೆ ಜಮೀನು ನೀಡಲಾಯಿತು. ಅಪ್ಪಟ ದೇಶಭಕ್ತ ರಾಯಣ್ಣ ಯುವಕರಿಗೆ ಸ್ಫೂರ್ತಿಯಾಗಬೇಕು ಎಂಬ ಕಾರಣಕ್ಕೆ 267 ಕೋಟಿ ವೆಚ್ಚದಲ್ಲಿ ಸೈನಿಕ ಶಾಲೆ, ಶಿಲ್ಪವನ ನಿರ್ಮಿಸಲಾಗಿದೆ. ಬಾಲಕಿಯರು ಸೇರಿದಂತೆ 230 ವಿದ್ಯಾರ್ಥಿಗಳು ಸೈನಿಕ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ದೇಶಪ್ರೇಮ ಬೆಳೆಸಲು ಶಾಲೆ ಪ್ರೇರಣೆಯಾಗಿದೆ. ಸಂಗೊಳ್ಳಿ ರಾಯಣ್ಣನಲ್ಲಿದ್ದ ತಾಯ್ನಾಡಿನ ಪ್ರೇಮವನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದರು.
ಒಡೆದಾಳುವ ನೀತಿಯಿಂದಲೇ ಬ್ರಿಟಿಷರು ಯಶಸ್ಸು ಸಾಧಿಸಿದರು...ಮೊಗಲರು ಹಾಗೂ ಬ್ರಿಟಿಷರು ಸ್ವಂತ ಸಾಮರ್ಥ್ಯದಿಂದ ಭಾರತವನ್ನು ಆಳಲಿಲ್ಲ, ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ನಮ್ಮನ್ನು ಆಳುವಲ್ಲಿ ಯಶಸ್ವಿಯಾದರು. ಅಂಥದ್ದೇ ಸ್ಥಿತಿ ಈಗ ದೇಶದಲ್ಲಿ ನಿರ್ಮಾಣ ಆಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವುದು ಮಹಾತ್ಮ ಗಾಂಧೀಜಿ ನೇತೃತ್ವದ ಕಾಂಗ್ರೆಸ್ ಎಂಬುದನ್ನು ಮರೆಯುವಂತಿಲ್ಲ. ಇನ್ನು ಮಸೀದಿಗಳನ್ನು ಧ್ವಂಸಗೊಳಿಸಿ ದೇವಸ್ಥಾನ ನಿರ್ಮಿಸುತ್ತೇವೆ ಎಂದು ಯಾರೋ ಒಬ್ಬ ಮೂರ್ಖ ಹೇಳುತ್ತಾನೆ. ಅಂಥವರಿಗೆ ಚಪ್ಪಾಳೆ ತಟ್ಟಬೇಡಿ, ಬೆಂಬಲಿಸಬೇಡಿ. ಸಂಗೊಳ್ಳಿ ರಾಯಣ್ಣನಂಥವರಿಗೆ ಮಾತ್ರ ಚಪ್ಪಾಳೆ ತಟ್ಟಿ ಎನ್ನುವ ಮೂಲಕ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೆಸರು ಹೇಳದೇ ಸಿದ್ದರಾಮಯ್ಯ ತಿರುಗೇಟು ಕೊಟ್ಟರು.
ಶಾಸಕ ಮಹಾಂತೇಶ ಕೌಜಲಗಿಯಂಥ ಸಭ್ಯರು ರಾಜಕಾರಣದಲ್ಲಿ ಇರಬೇಕು. ಜನರನ್ನು ದ್ವೇಷ ಮಾಡುವವರು ಇರಬಾರದು. ಜನರನ್ನು ಪ್ರೀತಿಸುವರು ರಾಜಕಾರಣದಲ್ಲಿ ಇರಬೇಕು. ಐದೂ ಗ್ಯಾರಂಟಿ ಕೊಟ್ಟಿದ್ದೇವೆ. ಅವು ಜಾರಿಗೆ ಬರುತ್ತಿವೆ. ಈ ವರ್ಷ 38 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಮುಂದಿನ ವರ್ಷ 58 ಸಾವಿರ ಕೋಟಿ ಖರ್ಚು ಮಾಡುತ್ತೇವೆ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಒಂದು ವೇಳೆ ದಿವಾಳಿಯಾಗಿದ್ದರೆ ಪಂಚ ಗ್ಯಾರಂಟಿ ಯೋಜನೆಗಳನ್ನು ಮತ್ತು ಇತರ ಅಭಿವೃದ್ಧಿ ಯೋಜನೆ ಜಾರಿಗೊಳಿಸಲು ಹೇಗೆ ಸಾಧ್ಯವಿತ್ತು ಎಂದು ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸಂಗೊಳ್ಳಿ ರಾಯಣ್ಣನವರ ಹೆಸರು ದೇಶದಾದ್ಯಂತ ಪ್ರಸಿದ್ಧಿಗೊಳಿಸಲು ಅನುಕೂಲವಾಗುವಂತೆ ಸೈನಿಕ ಶಾಲೆಯನ್ನು ಆರಂಭಿಸಲಾಗಿದೆ. ಈ ಶಾಲೆ ಇಡೀ ದೇಶಕ್ಕೆ ಮಾದರಿಯಾಗಬೇಕು. ಸ್ಥಳೀಯ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಅನುಕೂಲವಾಗುವಂತೆ ರಾಜ್ಯದಾದ್ಯಂತ ಸೈನಿಕ ಶಾಲೆಯ ಮಾದರಿಯಲ್ಲಿ ಸಂಗೊಳ್ಳಿ ರಾಯಣ್ಣ ಶಾಲೆಗಳನ್ನು ಸ್ಥಾಪಿಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.