ಬೆಳಗಾವಿ: ಡಿ.ಕೆ.ಶಿವಕುಮಾರ್ ಎರಡನೇ ಬಾರಿ ತಿಹಾರ್ ಜೈಲಿಗೆ ಹೋಗಲು ರೆಡಿಯಾಗಬೇಕು ಎಂಬ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಳಿನ್ ಕುಮಾರ್ ಕಟೀಲ್, ಹೆಚ್.ಡಿ.ಕುಮಾರಸ್ವಾಮಿ ನ್ಯಾಯಾಧೀಶರೇನು? ಎಂದು ತಿರುಗೇಟು ನೀಡಿದರು.
ಇನ್ನು ಸಿ.ಟಿ.ರವಿಗೆ ಲೂಟಿ ರವಿ ಎಂದು ಹೆಸರು ಕೊಟ್ಟಿದ್ದೇ ಅವರ ಪಾರ್ಟಿ. ಯಾರು ಯಾರು ಏನೇನು ಮಾತನಾಡಿದ್ದಾರೆ ಎಂಬ ದಾಖಲೆ ನನ್ನ ಬಳಿ ಇದೆ. ಸಮಯ ಬರಲಿ, ಎಲ್ಲವನ್ನೂ ಹೇಳುತ್ತೇನೆ ಎಂದರು. ಇದೇ ವೇಳೆ, ಸಿ.ಎಂ.ಇಬ್ರಾಹಿಂ ಇಂಡಿಯಾ ಮೈತ್ರಿಕೂಟ ಬೆಂಬಲಿಸುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಮಹದಾಯಿ ಯೋಜನೆ ಜಾರಿಗೆ ಎದುರಾಗಿರುವ ಅಡೆತಡೆಗಳನ್ನು ಕೇಂದ್ರ ಸರ್ಕಾರ ನಿವಾರಿಸಬೇಕು. ಯೋಜನೆ ಜಾರಿಗೆ ನಾವು ಬದ್ಧ ಎಂದರು. ಬೆಳಗಾವಿಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಕಾವೇರಿ ನದಿ ನೀರು ವಿವಾದ ಸಂಬಂಧ ಆರಂಭದಲ್ಲಿ ನಾವು ಬ್ಯುಸಿ ಇದ್ದೆವು. ಮೇಕೆದಾಟು ಯೋಜನೆಯಂತೆ ಮಹದಾಯಿಯನ್ನೂ ಆದ್ಯತೆ ಮೇರೆಗೆ ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಆಡಳಿತದಲ್ಲಿ ಮಹದಾಯಿ ಯೋಜನೆ ಜಾರಿ ಆಗಿಯೇ ಬಿಟ್ಟಿತು ಎಂದು ಬೀಗಿದ್ದರು. ಅವರು ಎಲ್ಲ ಕಡೆಯೂ ವಿಜಯೋತ್ಸವ ಮಾಡಿದರು. ತಕ್ಷಣ ಕೇಂದ್ರ ಸರ್ಕಾರ ಅಡೆ ತಡೆಗಳನ್ನು ನಿವಾರಿಸಿ ನಮಗೆ ಅನುಕೂಲ ಮಾಡಿ ಕೊಡಬೇಕು. ಮಹದಾಯಿ ಜಾರಿಗೊಳಿಸಲು ನಮ್ಮ ಸರ್ಕಾರ ಇಚ್ಛಾಶಕ್ತಿ ಹೊಂದಿದೆ ಎಂದರು.
ಜಲಾಶಯಗಳಲ್ಲಿ ನೀರಿನ ಪ್ರಮಾಣ: ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದರೂ ಈ ಭಾಗದ ನೀರಾವರಿ ಕಾಮಗಾರಿಗಳ ಸ್ಥಿತಿಗತಿ, ನೀರಿನ ಪ್ರಮಾಣ ಸೇರಿ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ಜಿಲ್ಲೆಯ ಮಲಪ್ರಭಾ ನದಿಯ ರೇಣುಕಾ ಸಾಗರ ಜಲಾಶಯ ಶೇ.53ರಷ್ಟು ತುಂಬಿದ್ದು, ಇನ್ನುಳಿದಂತೆ ಘಟಪ್ರಭಾ, ಮಾರ್ಕಂಡೇಯ, ಹಿಪ್ಪರಗಿ, ಮಲಪ್ರಭಾ, ಆಲಮಟ್ಟಿ ಜಲಾಶಯಗಳು ಶೇ.90ಕ್ಕಿಂತ ಹೆಚ್ಚು ಭರ್ತಿಯಾಗಿವೆ ಎಂದು ಮಾಹಿತಿ ನೀಡಿದರು.