ಬೆಳಗಾವಿ: ಸವದತ್ತಿ ಯಲ್ಲಮ್ಮ ಮತ ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಬಿಜೆಪಿ ಶಾಸಕನಾಗಿ ಆಯ್ಕೆಯಾಗಿದ್ದು, ಡೆಪ್ಯುಟಿ ಸ್ಪೀಕರ್ ಹುದ್ದೆ ನಿಭಾಯಿಸುತ್ತಿದ್ದ ಆನಂದ ಮಾಮನಿ (56) ಶನಿವಾರ ಮಧ್ಯರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸ್ವಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ಕಳೆದ ಹಲವು ದಿನಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕಳೆದೆರಡು ದಿನಗಳಿಂದ ಕೋಮಾ ಸ್ಥಿತಿಗೆ ತಲುಪಿದ್ದರು. ಶನಿವಾರ ರಾತ್ರಿ 12 ಗಂಟೆಯ ವೇಳೆಗೆ ಆನಂದ ಮಾಮನಿ ಕೊನೆಯುಸಿರೆಳೆದಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರೊಂದಿಗೆ ಆನಂದ ಮಾಮನಿ ಬೆಂಗಳೂರಿನಿಂದ ಸವದತ್ತಿಗೆ ಪಾರ್ಥಿವ ಶರೀರದ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆ್ಯಂಬುಲೆನ್ಸ್‌ನಲ್ಲಿಯೇ ರಸ್ತೆಯ ಮೂಲಕ ಸವದತ್ತಿಗೆ ಮೃತದೇಹ ಸ್ಥಳಾಂತರಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸ್ವಾಗತಿಸುತ್ತಿರುವ ಆನಂದ ಮಾಮನಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಮಾಮನಿ:ಇತ್ತೀಚೆಗಷ್ಟೇ ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಅವರು, ಶೀಘ್ರದಲ್ಲೇ ಗುಣಮುಖವಾಗಿ ಜನ ಸೇವೆ ಬರುತ್ತೇನೆ, ಯಾರೂ ಆತಂಕಪಡಬೇಡಿ. ಊಹಾಪೋಹಗಳಿಗೆ ಕಿವಿಗೊಡಬೇಡಿ, ನಾನು ಚೆನ್ನಾಗಿದ್ದೇನೆ ಎಂದಿದ್ದರು. ಕಳೆದ ಎರಡು ದಿನಗಳ ಹಿಂದಷ್ಟೇ ತಮ್ಮ ದೊಡ್ಡಪ್ಪನ ಸಾವಿಗೆ ಸಂತಾಪ ಸೂಚಿಸಿದ್ದರು.
ಸಿಎಂ ಸಂತಾಪ: ಆನಂದ ಮಾಮನಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದು, 'ನಮ್ಮ ಪಕ್ಷದ ಶಾಸಕರು, ರಾಜ್ಯ ವಿಧಾನಸಭೆಯ ಮಾನ್ಯ ಉಪ ಸಭಾಧ್ಯಕ್ಷರಾದ ಆನಂದ ಚಂದ್ರಶೇಖರ ಮಾಮನಿ ಅವರು ನಿಧನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಈ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ' ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ, ಆಸ್ಪತ್ರೆಗೆ ಭೇಟಿ ನೀಡಿ ಪಾರ್ಥಿವ ಶರೀರದ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಶಾಲೆಗಳಿಗೆ ಪೋಷಕರಿಂದ ದೇಣಿಗೆ: 48 ಗಂಟೆಯಲ್ಲಿ ಸುತ್ತೋಲೆ ಹಿಂಪಡೆದ ಶಿಕ್ಷಣ ಇಲಾಖೆ