ಬೆಂಗಳೂರು: ಪಠ್ಯ ಪರಿಷ್ಕರಣೆ ವಿವಾದ ಹೊಸ ಸ್ವರೂಪ ಜತೆಗೆ ಎರಡು ಆಯಾಮ ಪಡೆದುಕೊಂಡಿದೆ. ಒಂದು ಕಡೆ ಪಠ್ಯಪುಸ್ತಕದಿಂದ ತಮ್ಮ ಲೇಖನ ಕೈಬಿಡುವಂತೆ ಸಾಹಿತಿಗಳು ಆಗ್ರಹ ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರತಿಷ್ಠಾನಗಳಿಂದ ಸಾಹಿತಿಗಳು ಹೊರ ನಡೆಯುತ್ತಿದ್ದಾರೆ. ಇದರಿಂದಾಗಿ ವಿವಾದ ಮತ್ತಷ್ಟು ಜಟಿಲವಾಗುವಂತಾಗಿದೆ. ಸರ್ಕಾರಕ್ಕೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಬಿಸಿತುಪ್ಪವಾಗಿ ಪರಿಣಮಿಸಿದೆ.
ರಾಜೀನಾಮೆ ಅಸ್ತ್ರ: ನಾಡಗೀತೆಗೆ ಅಪಮಾನ ಮಾಡಿದವರ ವಿರುದ್ಧ ಕ್ರಮಕೈಗೊಳ್ಳದ ಸರ್ಕಾರದ ಧೋರಣೆ ಖಂಡಿಸಿ ಕುವೆಂಪು ಅವರ ಅವಮಾನವನ್ನು ಪ್ರತಿಭಟಿಸಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಹಂಪ ನಾಗರಾಜಯ್ಯ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್ ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಸ್ ಜಿ ಸಿದ್ದರಾಮಯ್ಯ ತಮ್ಮ ತಮ್ಮ ಅಧ್ಯಕ್ಷ ಸ್ಥಾನಗಳಿಗೆ ರಾಜೀನಾಮೆ ಕೊಟ್ಟಿದ್ದಾರೆ.
ಹಂಪನಾ ಅಧ್ಯಕ್ಷ ಸ್ಥಾನದ ಜೊತೆಗೆ ಪ್ರತಿಷ್ಠಾನದ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಇನ್ನು ಜಿಎಸ್ಎಸ್ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಪ್ರೊ. ಎಸ್.ಜಿ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಪ್ರತಿಷ್ಠಾನದ ಸದಸ್ಯರಾದ ಡಾ.ಹೆಚ್.ಎಸ್.ರಾಘವೇಂದ್ರ ರಾವ್, ಡಾ.ಚಂದ್ರಶೇಖರ್ ನಂಗಲಿ,ಡಾ.ನಟರಾಜ ಬೂದಾಳು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ.
ಸಾಹಿತಿ ದೇವನೂರು ಮಹಾದೇವ, ಹಿರಿಯ ವಿದ್ವಾಂಸ ಡಾ. ಜಿ. ರಾಮಕೃಷ್ಣ ತಮ್ಮ ಲೇಖನಗಳನ್ನು ಪಠ್ಯದಿಂದ ಕೈಬಿಡುವಂತೆ ಸರ್ಕಾರವನ್ನು ಆಗ್ರಹಿಸಿದ್ದು, ಈ ಮೂಲಕ ಲೇಖನ ಕೈಬಿಡಿ ಎಂಬಂತಹ ಅಭಿಯಾನ ಆರಂಭಗೊಂಡಂತಾಗಿದೆ. ಹಿಂದಿನ ಪಠ್ಯವನ್ನು ಮುಂದುವರಿಸುವಂತೆ ಒತ್ತಾಯಿಸಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ವಿವಾದಕ್ಕೆ ತೆರೆ ಎಳೆಯುವಂತೆ ಬರಗೂರು ರಾಮಚಂದ್ರಪ್ಪ, ಹಂಪನಾ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸಾಹಿತಿ ದೇವನೂರು ಮನವಿ : 10ನೇ ತರಗತಿಯ ಪಠ್ಯದಲ್ಲಿ ಸಾಹಿತ್ಯದ ದಿಗ್ಗಜ ದೇವನೂರು ಮಾಹಾದೇವ ಅವರ ಪಾಠ ಸೇರಿಸಲಾಗಿದೆ. ದೇವನೂರು ಮಹಾದೇವ ಬರೆದ ಎದೆಗೆ ಬಿದ್ದ ಅಕ್ಷರ ಎಂಬ ಗದ್ಯಪಾಠ ಸೇರಿಸಲಾಗಿದೆ. ಆದರೆ, ನನ್ನ ಪಾಠ ಸೇರ್ಪಡೆಗೆ ನನ್ನ ಒಪ್ಪಿಗೆ ಇಲ್ಲ ಎಂದು ಲೇಖಕ ದೇವನೂರು ಮಹಾದೇವ ಅವರು ಹೇಳಿದ್ದಾರೆ. ಸದ್ಯ ಶುರುವಾಗಿರುವ ಪಠ್ಯ ಪರಿಷ್ಕರಣೆ ಜಟಾಪಟಿ ಹಿನ್ನೆಲೆಯಲ್ಲಿ ನನ್ನ ಕಥನದ ಭಾಗವನ್ನ ಪಠ್ಯದಲ್ಲಿ ಸೇರಿಸಿರದಿದ್ದರೆ ನನಗೆ ಹೆಚ್ಚು ಸಂತೋಷ.
ಹತ್ತನೇ ತರಗತಿಯ ಪಠ್ಯದಲ್ಲಿ ಪಾಠ ಸೇರಿಸಿದ್ದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ, ಪಠ್ಯದಲ್ಲಿ ಈ ಹಿಂದೆ ಇದ್ದ ಎಲ್.ಬಸವರಾಜು, ಎ.ಎನ್. ಮೂರ್ತಿರಾವ್, ಪಿ. ಲಂಕೇಶ್, ಸಾರಾ ಅಬೂಬಕರ್ ಅವರ ಕತೆ, ಲೇಖನಗಳನ್ನು ಕೈಬಿಟ್ಟಿರುವವರಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಏನೇನೂ ತಿಳಿದಿಲ್ಲ ಅಂತಲೇ ಅರ್ಥ. ಆದ್ದರಿಂದ ನನ್ನ ಪಾಠ ಸೇರಿಸಿದ್ದರೆ ತೆಗೆಯಬೇಕು ಎಂದು ಸೂಚಿಸಿದ್ದಾರೆ.
ನನ್ನ ಬರಹದ ಆಯ್ಕೆಗೆ ನನ್ನ ಸಮ್ಮತಿ ಇಲ್ಲ ಎಂದಿದ್ದ ಡಾ.ಜಿ.ರಾಮಕೃಷ್ಣ : ದೇವನೂರು ಬೆನ್ನಲ್ಲೇ ಪಠ್ಯ ಪರಿಷ್ಕರಣಾ ಸಮಿತಿ ನನ್ನ ಯಾವುದಾದರೂ ಬರಹವನ್ನು ಆಯ್ಕೆ ಮಾಡಿಕೊಂಡಿದ್ದರೆ ಅದಕ್ಕೆ ನನ್ನ ಸಮ್ಮತಿ ಇರುವುದಿಲ್ಲ ಎಂದು ಹಿರಿಯ ವಿದ್ವಾಂಸ ಡಾ. ಜಿ. ರಾಮಕೃಷ್ಣ ಅವರು ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ರಾಜ್ಯದ ಶಾಲೆಗಳ ಪಠ್ಯಪುಸ್ತಕಗಳ ಪರಿಷ್ಕರಣೆಯು ತೀರಾ ಅಪ ಮಾರ್ಗದಲ್ಲಿ ಸಾಗುತ್ತಿದೆ. ಶಿಕ್ಷಣವನ್ನು ಕೆಟ್ಟ ರಾಜಕೀಯಕ್ಕೆ ಗುರಿ ಮಾಡಲಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಕ್ಕಳಿಗೆ ವಿಷ ಉಣಿಸುವುದು ಬೌದ್ಧಿಕ ಕ್ಷೇತ್ರದಲ್ಲಿನ ದುರಂತ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಪತ್ರ ಬರೆದ ಸಾಹಿತಿಗಳು: ರಾಜ್ಯದ ಪ್ರೌಢಶಿಕ್ಷಣ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದ ಕುರಿತು ಸಾಹಿತಿಗಳಾದ ಬರಗೂರು ರಾಮಚಂದ್ರ ಹಾಗೂ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಪಠ್ಯ ಪುಸ್ತಕಗಳ ವಿಷಯದಲ್ಲಿ ಈಗ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಬೇಕು, ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಬೇಕು ಎಂದು ಬರಗೂರು ರಾಮಚಂದ್ರಪ್ಪ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂಬ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ಬರಗೂರು, ಕುವೆಂಪು ಪಾಠ ಇರುವ 4ನೇ ತರಗತಿ ‘ಪರಿಸರ ಅಧ್ಯಯನ’ ಪುಸ್ತಕದ ಪರಿಷ್ಕರಣೆ ಮಾಡಿದ್ದು ನಾವಲ್ಲ. ಕುವೆಂಪು ಕುರಿತ ಪರಿಚಯವನ್ನು ನನ್ನ ನೇತೃತ್ವದ ಸಮಿತಿಯು ಬರೆದಿದೆ ಎಂದು ಹೇಳಲಾಗ್ತಿದೆ. ಈ ಪರಿಚಯವು ಪಠ್ಯ ಪುಸ್ತಕದ ಮೂಲ ರಚನೆಯಲ್ಲಿ ಬರೆಯಲ್ಪಟ್ಟಿದೆ. ನಮ್ಮ ಕಾಲದ ಪರಿಷ್ಕರಣೆಯಲ್ಲಿ ಇದನ್ನ ಬರೆದಿಲ್ಲ. ನಾನು ಕುವೆಂಪು ಅವರ ಮನುಜ ಮತ ವಿಶ್ವಪಥ ಸಂದೇಶದ ಬೆಳಕಿನಲ್ಲಿ ಸಾಗುತ್ತಿದ್ದೇನೆ. ನನ್ನಂತವರು ಅವರ ಅರ್ಥಪೂರ್ಣ ಸಾಧನೆಯನ್ನು ಸ್ವಲ್ಪವೂ ಕಡೆಗಣಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಇನ್ನೊಂದೆಡೆ ಪರಿಷ್ಕೃತ ಚಕ್ರತೀರ್ಥ ಸಮಿತಿಯ ಪಠ್ಯವನ್ನು ತಡೆಹಿಡಿಯಿರಿ ಎಂದು ಪ್ರೊ. ಹಂಪ ನಾಗರಾಜಯ್ಯ ಸಿಎಂಗೆ ಪತ್ರ ಬರೆದು ಆಗ್ರಹಿಸಿದ್ದು, ವಿದ್ಯಾರ್ಥಿಗಳು, ಪೋಷಕರಲ್ಲದೇ ಜನರಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.