ಕರ್ನಾಟಕ

karnataka

ETV Bharat / state

ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ -2022ಕ್ಕೆ ಪರಿಷತ್​ನಲ್ಲಿ ಅನುಮೋದನೆ - ಈಟಿವಿ ಭಾರತ ಕನ್ನಡ

ವಿಧಾನಪರಿಷತ್​ನಲ್ಲಿ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ 2022ನ್ನು ಕೈಗಾರಿಕಾ ಸಚಿವ ಮುರುಗೇಶ್​ ನಿರಾಣಿ ಮಂಡಿಸಿದರು.

Etv karnataka-special-investment-zone-bill-presented-by-minister-murugesh-nirani
ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ -2022 : ಪರಿಷತ್​ನಲ್ಲಿ ಅಂಗೀಕಾರ

By

Published : Dec 29, 2022, 4:35 PM IST

ಬೆಳಗಾವಿ : ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ -2022ನ್ನು ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ವಿಧಾನ ಪರಿಷತ್​ನಲ್ಲಿ ಮಂಡಿಸಿದರು. ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2022ನೇ ಸಾಲಿನ “ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ” ಮಂಡಿಸಿದರು.

ವಿಧೇಯಕದ ವಿಚಾರವಾಗಿ ಮಾತನಾಡಿದ ವಿಧಾನಪರಿಷತ್​ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಸಚಿವರಿಗೆ ಸ್ವಾತಂತ್ರ್ಯ ಸಿಕ್ಕಿದ್ದೇ 2013ರ ನಂತರ ಅನ್ನುವ ಭಾವನೆ ಇದೆ. ಡಾ.ಎಂ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೇ ಎಲೆಕ್ಟ್ರಾನಿಕ್​ ಸಿಟಿ ಅಭಿವೃದ್ಧಿಗೆ ಶ್ರಮಿಸಿದ್ದರು. ಇದಾದ ಬಳಿಕ ಇಲ್ಲಿಗೆ ಇನ್​ಫೋಸಿಸ್ ಹಾಗೂ ವಿಪ್ರೋದಂತಹ ದೊಡ್ಡ ಕಂಪನಿಗಳು ಬಂದವು. ಬಳಿಕ ಉದ್ದನೇ ಮೇಲುರಸ್ತೆ ಕೂಡ ನಿರ್ಮಾಣವಾಗಿದೆ.

ಆರಂಭದಲ್ಲಿ ಇದನ್ನು ನೋಡಲು ಜನ ಅತ್ತ ತೆರಳುತ್ತಿದ್ದರು. ಆದರೆ, ಇಂದು ಅತ್ಯಂತ ಅವ್ಯವಸ್ಥಿತವಾಗಿ ಈ ಭಾಗ ಬೆಳೆದಿದೆ. ಅತ್ಯಂತ ಕೆಟ್ಟದಾದ ನಿರ್ವಹಣೆ ಇಲ್ಲಿದೆ. ಸಾಕಷ್ಟು ಸಮಸ್ಯೆ ಉಂಟಾಗಿದೆ. ಜನ ಇತ್ತ ತೆರಳುವುದಕ್ಕೆ ಬೇಸರ ಪಡುವ ಸ್ಥಿತಿ ಇದೆ ಎಂದರು. ಇನ್ನು ಇದಕ್ಕೆ ಅನುಕೂಲ ಮಾಡಿಕೊಳ್ಳಲು ಸರ್ಕಾರ ಈ ಒಂದು ತಿದ್ದುಪಡಿ ವಿಧೇಯಕ ತಂದಿದೆ, ಇದನ್ನು ಖಂಡಿಸುತ್ತೇವೆ. ಇಲ್ಲಿ ವಾಸಿಸುವವರು ದೊಡ್ಡ ಮಟ್ಟದಲ್ಲಿ ತೆರಿಗೆ ನೀಡುತ್ತಿದ್ದಾರೆ. ಸೂಕ್ತ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕು.

ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಸಾಧ್ಯವಾದಷ್ಟು ಅಲ್ಲಿನ ದೊಡ್ಡ ಕಂಪನಿಗಳು ಕೈಬಿಟ್ಟು ಹೋಗುವ ಮುನ್ನ ಅಭಿವೃದ್ಧಿಗೆ ಒತ್ತುಕೊಡುವುದು ಸೂಕ್ತ. ಈ ಬಗ್ಗೆ ತುರ್ತಾಗಿ ಚರ್ಚೆ ನಡೆಸುವುದು ಕಷ್ಟಸಾಧ್ಯ. ಸುದೀರ್ಘ ಚರ್ಚೆಯ ಅಗತ್ಯವಿದೆ. ಸಾಧ್ಯವಾದರೆ ಸದನ ಸಮಿತಿಗೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಭಾಗಕ್ಕೆ ಕೈಗಾರಿಕೆಗೆ ಬರಬೇಕು:ವಿಧೇಯಕ ಕುರಿತು ಕಾಂಗ್ರೆಸ್ ಸದಸ್ಯರಾದ ಪಿ.ಆರ್. ರಮೇಶ್, ನಜೀರ್ ಅಹ್ಮದ್, ಪ್ರತಿಪಕ್ಷ ಸಚೇತಕ ಪ್ರಕಾಶ್​ ರಾಥೋಡ್, ಮತ್ತಿತರ ಸದಸ್ಯರು ಮಾತನಾಡಿ, ಈ ವಿಚಾರವನ್ನು ಸದನ ಸಮಿತಿಗೆ ವಹಿಸುವುದು ಸೂಕ್ತ. ಖಾಲಿ ಸ್ಥಳ ಇರುವಲ್ಲಿ, ಉತ್ತಮ ಕೈಗಾರಿಕಾ ಯೋಗ್ಯ ಭೂಮಿ ಇರುವಲ್ಲಿ ಹೊಸ ಕೈಗಾರಿಕೆ ಸ್ಥಾಪಿಸಿ. ರಾಜ್ಯದ ಬೇರೆ ಜಿಲ್ಲೆಗೆ ಇವನ್ನು ಕೊಂಡೊಯ್ದರೆ ಸಾಕಷ್ಟು ಅನುಕೂಲ ಹಾಗೂ ಉದ್ಯೋಗ ಸಿಗಲಿದೆ. ಬೆಂಗಳೂರು ಕೇಂದ್ರೀಕೃತವಾಗಿ ಕೈಗಾರಿಕೆ ಅಭಿವೃದ್ಧಿ ಪಡಿಸುವ ಅಗತ್ಯವೇನಿದೆ? ಗ್ರಾಮೀಣ ಭಾಗಕ್ಕೆ ಕೈಗಾರಿಕೆ ಬರಬೇಕು.

ಯಾವ ಮಾದರಿಯ ಭೂಮಿ ಕೊಳ್ಳಬೇಕೆಂಬ ನಿಯಮ ಅಳವಡಿಸದಿದ್ದರೆ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಇವೆಲ್ಲವನ್ನೂ ಯೋಚಿಸಿ ಬಿಲ್ ತರಬೇಕಿತ್ತು? ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ನೀಡುತ್ತೀರಾ ಎಂಬ ಬಗ್ಗೆ ಮಾಹಿತಿ ಇಲ್ಲ. ಸಾಕಷ್ಟು ಗೊಂದಲ ಇದ್ದು ಪರಿಶೀಲಿಸಿ ಬಿಲ್ ತರುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಜೆಡಿಎಸ್​ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಬಿಲ್​ನಲ್ಲಿ ಪ್ರಾಧಿಕಾರ ಎನ್ನಲಾಗಿದೆ.

ಕಾನೂನಿನ ಚೌಕಟ್ಟಿನ ಹೊರಗೆ ಇರಬಾರದು:ಅದರಲ್ಲಿ ಯಾರು ಇರುತ್ತಾರೆ ಎನ್ನುವ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ನೀಡಬೇಕಿತ್ತು. ವಿಶೇಷ ಹೂಡಿಕೆ ಪ್ರದೇಶ ಎಂಬ ಮಾಹಿತಿ ಇದೆ. ಕಾನೂನಿನ ಚೌಕಟ್ಟಿನ ಹೊರಗೆ ಇದು ಇರಬಾರದು. ಈ ವಿಧೇಯಕದ ಬಗ್ಗೆ ಮರು ಯೋಚನೆ ಮಾಡಿ. ನಿಯಮ ರೂಪಿಸಲು ಸಾಧ್ಯವಿದೆಯಾ ಎಂದು ಗಮನಿಸಿಸಲು ಸಲಹೆ ನೀಡಿದರು. ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಕಾನೂನು ತಜ್ಞರ ಜತೆ ಈ ವಿಧೇಯಕದ ಬಗ್ಗೆ ಸರ್ಕಾರ ಚರ್ಚೆ ಮಾಡಬೇಕು.

ಮಹಿಳಾ ಉದ್ಯಮಿಗಳಿಗೆ ಉತ್ತೇಜಿಸುವ ಯಾವುದೇ ಹೊಸ ಯೋಜನೆ ಇದುವರೆಗೂ ಬಂದಿಲ್ಲ. ಸರ್ಕಾರಕ್ಕೆ ಈ ಬಗ್ಗೆ ಆಸಕ್ತಿ ಇಲ್ಲವಾ? ಮಹಿಳಾ ಉದ್ಯಮ ಬೆಳೆಯುವುದು ಬೇಡವಾ? ಕೈಗಾರಿಕಾ ಭೂ - ಸರ್ವೆ ಆಗಿಯೇ ಇಲ್ಲ. ಅಧಿಕಾರಿಗಳು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೆಐಎಡಿಬಿ ಎಂದರೇ ಭೂ ಮಾಫಿಯಾ ಅನ್ನುವ ಅನುಮಾನ ನನಗಿದೆ. ಕೆಲವರು ಇಂದು ಕೈಗಾರಿಕಾ ಭೂಮಿಯನ್ನು ತಮ್ಮ ಪತ್ನಿ, ಉಪಪತ್ನಿ, ನಾದಿನಿಯರ ಹೆಸರಿನಲ್ಲಿ ಪಡೆದಿದ್ದಾರೆ.

ಕುಟುಂಬದವರ ಹೆಸರಲ್ಲಿ ನಿವೇಶನ:ನಿಯಮಾವಳಿ ಇದೆ. ಅದನ್ನು ದುರುಪಯೋಗಪಡಿಸಿಕೊಳ್ಳುವ ಕಾರ್ಯ ಹೆಚ್ಚಾಗಿದೆ. ನಿಯಮದ ಅಡಿ ಎಷ್ಟು ಜನರಿಗೆ ಬೇಕಾದರೂ ನೀಡಿ ವಿರೋಧವಿಲ್ಲ. ಸಾಮಾನ್ಯ ನಾಗರಿಕ ನಿವೇಶನಕ್ಕಾಗಿ ಒದ್ದಾಡುತ್ತಿದ್ದಾನೆ ಎಂದರು. ಇನ್ನು ಕೆಐಎಡಿಬಿಯಲ್ಲಿ ಕೆಲಸ ಮಾಡುವ ನೌಕರರೇ ತಮ್ಮ ಕುಟುಂಬದವರ ಹೆಸರಲ್ಲಿ ನಿವೇಶನ ಪಡೆದಿದ್ದಾರೆ. ಸಾಮಾನ್ಯರಿಗೆ ಸಿಕ್ಕೇ ಇಲ್ಲ. ಅಧಿಕಾರಿಗಳು ಆರೇಳು ನಿವೇಶನವನ್ನು ಬೇರೆ ಬೇರೆ ಕಡೆ ಪಡೆದಿದ್ದಾರೆ.

ಇವೆಲ್ಲವನ್ನೂ ಸರಿಪಡಿಸಿ. ಕೈಗಾರಿಕೆ ಬರಬೇಕು, ಎಲ್ಲರಿಗೂ ಉದ್ಯೋಗ ಸಿಗಬೇಕು ಎಂಬುದು ನಮ್ಮ ಆಸೆ. ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿ ಇಂತಹ ಬಿಲ್​ ತನ್ನಿ ನಾವು ಬೆಂಬಲಿಸುತ್ತೇವೆ ಎಂದರು. ಶಶಿಲ್​ ಜಿ. ನಮೋಶಿ ಸೇರಿದಂತೆ ಹಲವು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. ಸುದೀರ್ಘ ಚರ್ಚೆಯ ಬಳಿಕ ವಿಧೇಯಕ ವಿಧಾನ ಪರಿಷತ್​ನಲ್ಲಿ ಅಂಗೀಕಾರವಾಯಿತು.

ಇದನ್ನೂ ಓದಿ :8001.12 ಕೋಟಿ ರೂ. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜು ವಿಧಾನಸಭೆಯಲ್ಲಿ ಮಂಡನೆ,

ABOUT THE AUTHOR

...view details