ಕರ್ನಾಟಕ

karnataka

ETV Bharat / state

ಸದನದಲ್ಲಿ ಶಾಸಕರ ಶಿಸ್ತು ಪಾಠದ ಬಗ್ಗೆ ನಾಯಕರ ಚರ್ಚೆ : ಗರಂ ಆದ ಬಿಎಸ್​​​ವೈ, ಭಾವುಕರಾದ ಸ್ಪೀಕರ್

ಸದನದಲ್ಲಿ ಸದಸ್ಯರ ನಡುವಳಿಕೆ ವಿಚಾರವಾಗಿ ಚರ್ಚೆ ನಡೆಯುತ್ತಿದ್ದ ಸಮಸಯದಲ್ಲಿ ಸ್ಪೀಕರ್​ ಕಾಗೇರಿಯವರು ಕೆಲಕಾಲ ಭಾವುಕರಾದರು. ಇದೇ ವೇಳೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರು ಸ್ಪೀಕರ್​​​ ನಡೆಗೆ ಅಸಮಾಧಾನ ಹೊರ ಹಾಕಿದ್ದಾರೆ..

Karnataka speaker kageri emotional over in session
ಬೆಳಗಾವಿ ಅಧಿವೇಶನದಲ್ಲಿ ಭಾವುಕರಾದ ಸ್ಪೀಕರ್ ಕಾಗೇರಿ

By

Published : Dec 22, 2021, 6:17 PM IST

Updated : Dec 22, 2021, 8:23 PM IST

ಬೆಂಗಳೂರು :ವಿಧಾನಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಉತ್ತರ ನೀಡುತ್ತಿದ್ದಾಗ ಮಧ್ಯಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ, ಶೂನ್ಯ ವೇಳೆ ಗಮನಸೆಳೆಯುವ ಸೂಚನೆ ಎಲ್ಲವೂ ಒಂದೇ ಆದರೆ ಹೇಗೆ? ಎಲ್ಲರೂ ಎದ್ದು ನಿಂತು ಮಾತನಾಡಿದರೆ ಕಷ್ಟವಾಗುತ್ತದೆ ಎಂದರು.

ಗರಂ ಆದ ಬಿಎಸ್​​​ವೈ, ಭಾವುಕರಾದ ಸ್ಪೀಕರ್

ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತನಾಡಿ, ವಿಧಾನಸಭೆಯ ಸದನ ಪವಿತ್ರ ದೇಗುಲ ಎಂಬ ಭಾವನೆಯಿಂದ ನೋಡಬೇಕು. ಪ್ರಜಾಪ್ರಭುತ್ವದಲ್ಲಿ ಘನತೆ, ಗೌರವ ಎತ್ತಿ ಹಿಡಿಯುವಂತಾಗಬೇಕು. ವಿಧಾನಸಭೆ ಹಗುರವಾದರೆ ಚುನಾವಣೆಗೆ ಏಕೆ ನಿಲ್ಲುತ್ತೀರಿ ಎಂದು ಭಾವುಕರಾಗಿ ನುಡಿದರು.

ಶಿಮ್ಮಾದಲ್ಲಿ ನಡೆದ ಸ್ಪೀಕರ್‌ ಮತ್ತು ಸಭಾಪತಿಗಳ, ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರಿಗೆ ನೀಡುವ ತರಬೇತಿಯಲ್ಲಿ ಕಡ್ಡಾಯ ಹಾಜರಾತಿ ಇರಬೇಕು. ರಾಜಕೀಯ ಪಕ್ಷಗಳು ತಮ್ಮ ಶಾಸಕರ ನಡವಳಿಕೆಯನ್ನು ನಿಯಂತ್ರಿಸಲು ಶಿಸ್ತು ತರಬೇಕು.

ಜವಾಬ್ದಾರಿ ಮರೆತು ಅರಾಜಕತೆ ಮಾಡಿದರೆ ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ. ನಾವು ನಮ್ಮ ಜವಾಬ್ದಾರಿಯನ್ನು ಅರಿಯಬೇಕು. ಸಮಾಜವು ಎಚ್ಚರಿಕೆಯಿಂದ ಗಮನಿಸಬೇಕು. ಚುನಾವಣೆಯಿಂದ ಅಂತಃಶಕ್ತಿ ಕಳೆದುಕೊಂಡಿದ್ದಾರೆ. ಭವಿಷ್ಯದ ಚಿಂತೆ ಹಿಂದಿನ ತ್ಯಾಗದ ಕಲ್ಪನೆ ಇದ್ದರೆ ನಾವು ನಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು ಎಂದರು.

ಹೆಚ್ಚು ದಿನಗಳ ಕಾಲ ಸದನ ನಡೆದರೆ ಎಲ್ಲರಿಗೂ ಅವಕಾಶ ದೊರೆಯುತ್ತದೆ. ನಿಯಮಗಳ ಪಾಲನೆಯೂ ಆಗುತ್ತದೆ. ನಾವು ನಿಯಮಗಳನ್ನು ಅನುಷ್ಠಾನಕ್ಕೆ ತರಬೇಕು. ಎಲ್ಲರಿಗೂ ಅವಕಾಶ ಕಲ್ಪಿಸಲು ನಿಯಮದಲ್ಲಿ ಸಡಿಲಿಕೆಯಾಗುತ್ತದೆ ಎಂದರು.

ಆಗ ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ ಮಾತನಾಡಿ, ಶಾಸಕರಿಗೆ ನೀಡುವ ತರಬೇತಿಗೆ ಬರುವುದೇ ಇಲ್ಲ. ಸಚೇತಕರು ಸದಸ್ಯರ ಹಾಜರಾತಿ ಬಗ್ಗೆ ಗಮನಹರಿಸಲ್ಲ. ಶೂನ್ಯ ವೇಳೆ, ಪ್ರಶೋತ್ತರ ಎಲ್ಲವೂ ಒಂದೇ ರೀತಿಯಾದರೆ ಸಭಾಧ್ಯಕ್ಷರ ಪೀಠ ಮಾನಸಿಕ ಯಾತನೆಗೆ ಗುರಿಯಾಗುತ್ತದೆ. ಸಂಸದೀಯ ಭಾಷೆ, ಚೌಕಟ್ಟು ಮೀರಿ ಮಾತನಾಡಬಾರದು ಎಂದು ಹೇಳಿದರು.

ಮತ್ತೆ ಮಾಧುಸ್ವಾಮಿ ಮಾತನಾಡಿ, ಶೂನ್ಯ ವೇಳೆಯಲ್ಲಿ ಸ್ಪಷ್ಟೀಕರಣ, ಎಲ್ಲಾ ವಿಚಾರದಲ್ಲೂ ಎಲ್ಲರೂ ಮಾತನಾಡಬೇಕೆಂದರೆ ಹೇಗೆ, ಪ್ರಮುಖವಾದ ವಿಚಾರಗಳೇ ಸದನದಲ್ಲಿ ಚರ್ಚೆಯಾಗುತ್ತಿಲ್ಲ. ಹೀಗಾದರೆ, ಸದನದಲ್ಲಿ ಚರ್ಚೆ ಮಾಡಿ ಏನು ಪ್ರಯೋಜನ? ಶಿಸ್ತು ಇರಬೇಕು. ಸಭಾಧ್ಯಕ್ಷರು ಬಿಗಿಯಾದ ನಿಲುವು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ನಾವು ಮೌಲ್ಯಾಧಾರಿತ ಚರ್ಚೆಗಳನ್ನು ವಿರೋಧಿಸಿಲ್ಲ. ಕಾರ್ಯಕ್ರಮಗಳ ಪಟ್ಟಿ ರೀತಿಯಲ್ಲಿ ವಿಷಯಗಳ ಚರ್ಚೆಯಾಗುತ್ತಿಲ್ಲ. ಪ್ರತಿ ವಿಷಯದ ಚರ್ಚೆಗೂ ಸಮಯ ನಿಗದಿಪಡಿಸಿ, ಅನವಶ್ಯಕವಾಗಿ ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.

ಅಷ್ಟರಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ, 100 ದಿನ ಅಧಿವೇಶನ ನಡೆಸಿ ಎಂದು ಒತ್ತಾಯಿಸಿದರು. ಇನ್ನು ಒಂದು ವಾರಗಳ ಕಾಲ ಈ ಅಧಿವೇಶನವನ್ನು ವಿಸ್ತರಣೆ ಮಾಡಿ, ಜಂಟಿ ಅಧಿವೇಶನ ಮೂರು ವಾರ ಮಾಡಿ, ಬಜೆಟ್ ಅಧಿವೇಶನ ಒಂದು ತಿಂಗಳು ನಡೆಸಿ. ಆಗ ಶಾಸಕರಿಗೆ ಅವಕಾಶ ಸಿಗುತ್ತದೆ ಎಂಬ ಸಲಹೆ ಮಾಡಿದರು.

ಗರಂ ಆದ ಬಿಎಸ್​​​ವೈ :ಈ ನಡುವೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಭಾಧ್ಯಕ್ಷರು ಎಲ್ಲದಕ್ಕೂ ಅವಕಾಶ ನೀಡುವುದರಿಂದ ಗೊಂದಲಕ್ಕೆ ಕಾರಣವಾಗುತ್ತದೆ. ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಸಭಾಧ್ಯಕ್ಷರು ಬಿಗಿಯಾದ ನಿಲುವು ತೆಗೆದುಕೊಳ್ಳಬೇಕು. ಪ್ರಮುಖ ವಿಚಾರಗಳಿಗೆ ಮಾತನಾಡುವುದಕ್ಕೆ ಬಿಡಿ. ಮುಖ್ಯವಲ್ಲದ ಪ್ರಶ್ನೆಗೆ ಮಾತಿಗೆ ಯಾಕೆ ಅವಕಾಶ ಕೊಡ್ತೀರಿ. ಉಪದೇಶ ಮಾಡುವುದು ಸುಲಭ. ಬಿಗಿಯಾಗಿ ಕಲಾಪ ನಡೆಸುವುದಕ್ಕೆ ನಿಮಗೆ ಅಧಿಕಾರ ಇದೆ. ಆ ಪೀಠಕ್ಕೆ ಅಧಿಕಾರವಿದೆ. ಬಿಗಿ ಮಾಡದೇ ಇರೋದು ಯಾರ ತಪ್ಪು ಎಂದು ಪ್ರಶ್ನೆ ಮಾಡಿದರು.

ಯಾವುದಕ್ಕೆ ಅವಕಾಶ ಕೊಡಬೇಕು, ಯಾವುದಕ್ಕೆ ಅವಕಾಶ ಕೊಡಬಾರದು ಅನ್ನೋ ತೀರ್ಮಾನ ಮಾಡಬೇಕಾದವರು ನೀವು ಮತ್ತೆ ಸಂಸದೀಯ ಸಚಿವರು. ನೀವು ಕೇಳಿದವರೆಗಲ್ಲ ಅವಕಾಶ ಕೊಟ್ಟು, ಈ ರೀತಿಯ ಗೊಂದಲ ಸೃಷ್ಟಿಗೆ ಕಾರಣ ಯಾರು?, ನೀವು ಬಿಗಿಯಾದ ನಿಲುವನ್ನು ತೆಗೆದುಕೊಳ್ಳದೆ ಇರುವುದೇ ಕಾರಣ. ಕಾನೂನು ಚೌಕಟ್ಟಿನಲ್ಲಿ ಸದನ ನಡೆಯಲಿ. ಕಳೆದ ಒಂದು ವಾರದಿಂದ ಏಳೆಂಟು ಜನ ನಿಂತು ಮಾತಾಡ್ತಿದ್ದಾರೆ. ಆದರೆ, ಇದನ್ನು ನಿಯಂತ್ರಿಸಲು ತಾವು ಪ್ರಯತ್ನ ಮಾಡ್ತಿದ್ದೀರಿ. ಅದು ಯಶಸ್ವಿಯಾಗುತ್ತಿಲ್ಲ ಎಂದು ಸ್ಪೀಕರ್ ನಡೆಗೆ ಗರಂ ಆದರು.

ನಂತರ ಸ್ಪೀಕರ್ ಕಾಗೇರಿ ಮಾತನಾಡಿ, ಯಡಿಯೂರಪ್ಪನವರು ಹೇಳಿರೋದು ಸತ್ಯ. ಆದರೆ, ಸದನ ನಡೆಸುವ ಸಂದರ್ಭದಲ್ಲಿ ಇಲ್ಲಿ ನಡೆಯುವ ಪ್ರಸಂಗಗಳ ಬಗ್ಗೆ ನೀವು ( ಸದಸ್ಯರು) ಮೌನವಾಗಿದ್ದರೆ, ಸಂತೋಷ ಪಡುವ ರೀತಿಯಲ್ಲಿ ನೀವು ಇದ್ದರೆ, ನಾನು ಹೇಗೆ ಸದನ ನಡೆಸಲು ಸಾಧ್ಯ.

ಎದ್ದು ನಿಂತು ಮಾತಾಡೋರಿಗೆ ಹಿರಿಯರಾಗಿ, ಸಚಿವರು, ಪ್ರತಿಪಕ್ಷ ನಾಯಕರಂತೆ ಜವಾಬ್ದಾರಿಯುತರು ಹೇಳಬಹುದಲ್ಲಾ?. ಸ್ಪೀಕರ್ ನಿರ್ಣಯ ಸರಿತಪ್ಪಿನ ಬಗ್ಗೆ ಈವರೆಗೂ ಯಾರು ಮಾತಾಡಿದ್ದೀರಿ?. ಹೀಗಾಗಿ, ಈ ವ್ಯವಸ್ಥೆಯನ್ನು ಚೆನ್ನಾಗಿ ನಡೆಸಲು, ಹಿರಿಯರ ಮಾರ್ಗದರ್ಶನದೊಂದಿಗೆ ನಡೆಯೋಣ ಎಂದು ಸ್ಪೀಕರ್ ಸಿಟ್ಟಿನಿಂದಲೇ ಹೇಳಿದರು.

ನಂತರ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಪಕ್ಷದ ಸದಸ್ಯರ ಸಂಖ್ಯಾಬಲದ ಆಧಾರದ ಮೇಲೆ ಚರ್ಚೆಗೆ ಸಮಯ ನಿಗದಿ ಮಾಡಿ. ಸದನ ಹೆಚ್ಚು ಸಮಯ ನಿಗದಿ ಮಾಡಬೇಕು. ಮುಂದಿನ ದಿನಗಳಲ್ಲಿ ಸ್ಪೀಕರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಎಷ್ಟೋ ಬಾರಿ, ಸದನ ವಿಸ್ತರಣೆ ಮಾಡಿ ಎಂದು ಕೇಳಿದವರೆ ಸದನದಲ್ಲಿ ಇರೋದಿಲ್ಲ ಎಂದರು.

ಆದ್ಯತೆ ಮತ್ತು ಸದಸ್ಯರ ಸಂಖ್ಯೆ ಆಧರಿಸಿ ಅವಕಾಶ ಕೊಡಬೇಕೆಂಬ ಹೆಚ್.ಡಿ. ರೇವಣ್ಣ ಮಾತು ಸರಿ ಇದೆ. ಪಾರ್ಲಿಮೆಂಟ್ ರೀತಿ ವ್ಯವಸ್ಥೆ ಬರಬೇಕು. ಕೆಲವು ನೀತಿ, ನಿಯಮ ಪುನರ್ ಪರಿಶೀಲನೆ ಆಗಬೇಕು. ಫಲಪ್ರದ ಚರ್ಚೆ ಎಷ್ಟಾಗಿದೆ ಅನ್ನೋದನ್ನು ನೋಡಬೇಕು ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಎಂಇಎಸ್​​ ನಿಷೇಧಕ್ಕೆ ಆಗ್ರಹ: ಕನ್ನಡಪರ ಸಂಘಟನೆಗಳಿಂದ ಡಿ. 31ರಂದು ಕರ್ನಾಟಕ ಬಂದ್​

Last Updated : Dec 22, 2021, 8:23 PM IST

ABOUT THE AUTHOR

...view details