ಅಥಣಿ: ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ನಡೆದ ಭೂಮಿ ಪೂಜೆ ಸಭೆಯಲ್ಲಿ ಸಚಿವ ಶ್ರೀಮಂತ ಪಾಟೀಲ ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ್ದಕ್ಕೆ ಕನ್ನಡ ಪರ ಹೋರಾಟಗಾರರು ರಸ್ತೆ ಬಂದ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಮರಾಠಿ ಭಾಷಣ ಮಾಡಿದ್ದ ಸಚಿವ ಶ್ರೀಮಂತ ಪಾಟೀಲ ಗಡಿಪಾರಿಗೆ ಆಗ್ರಹಿಸಿ ಕ.ರ.ವೇ ಪ್ರತಿಭಟನೆ - ಶ್ರೀಮಂತ ಪಾಟೀಲ ಗಡಿಪಾರು ಮಾಡುವಂತೆ ಆಗ್ರಹ
ಮರಾಠಿಯಲ್ಲಿ ಭಾಷಣ ಮಾಡಿದ್ದ ಜವಳಿ ಮತ್ತು ಅಲ್ಪಸಂಖ್ಯಾತರ ಇಲಾಖೆ ಸಚಿವ ಶ್ರೀಮಂತ ಪಾಟೀಲ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
![ಮರಾಠಿ ಭಾಷಣ ಮಾಡಿದ್ದ ಸಚಿವ ಶ್ರೀಮಂತ ಪಾಟೀಲ ಗಡಿಪಾರಿಗೆ ಆಗ್ರಹಿಸಿ ಕ.ರ.ವೇ ಪ್ರತಿಭಟನೆ Karnataka Rakshna vedike activists Protest in Athani..](https://etvbharatimages.akamaized.net/etvbharat/prod-images/768-512-8286460-596-8286460-1596526374746.jpg)
ಅಥಣಿ ತಾಲೂಕು ಘಟಕ ಕರ್ನಾಟದ ರಕ್ಷಣಾ ವೇದಿಕೆ ಕಾರ್ಯಕರ್ತರು ಸಚಿವ ಶ್ರೀಮಂತ ಪಾಟೀಲರ ವಿರುದ್ಧ ಪ್ರತಿಭಟನೆ ನಡೆಸಿ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯನ್ನು ಕೆಲ ಹೊತ್ತು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ಕರ್ನಾಟಕದ ಸಚಿವರಾಗಿರುವ ಶ್ರೀಮಂತ ಪಾಟೀಲ ಮರಾಠಿ ಭಾಷೆಯಲ್ಲಿ ಭಾಷಣ ಮಾಡಿರುವುದು ಖಂಡನೀಯ. ಕನ್ನಡಿಗರಿಗೆ ಮಾಡಿರುವ ಅಪಮಾನ. ರಾಜ್ಯ ಸರ್ಕಾರ ತಕ್ಷಣವೇ ಅವರಿಂದ ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಮರಾಠಿ ಮೇಲೆ ಅಷ್ಟು ಪ್ರೀತಿಯಿದ್ದರೆ ಅವರು ಅಲ್ಲೇ ವಾಸಿಸಲಿ. ನಮ್ಮ ನೆಲ, ಜಲ, ಅಧಿಕಾರ ಬೇಕು. ಆದರೆ ಇವರು ಮಾತು ಮಾತ್ರ ಮರಾಠಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಅವರ ಸಕ್ಕರೆ ಕಾರ್ಖಾನೆಯಲ್ಲಿ ಮಹಾರಾಷ್ಟ್ರದ ಜನರಿಗೆ ಉದ್ಯೋಗ ನೀಡಿದ್ದಾರೆ ಎಂದು ಆರೋಪಿಸಿದರು. ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಜಗಳ ಹಚ್ಚುವ ಪ್ರವೃತ್ತಿಯ ಇವರನ್ನು ತಕ್ಷಣವೇ ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.