ಕರ್ನಾಟಕ

karnataka

ETV Bharat / state

ವಾಯವ್ಯ ಶಿಕ್ಷಕ ಕ್ಷೇತ್ರ: ತ್ರಿಕೋನ ಸ್ಪರ್ಧೆಗೆ ವೇದಿಕೆಯಾದ ಚುನಾವಣಾ ಕಣ

ವಾಯವ್ಯ ಶಿಕ್ಷಕ ಕ್ಷೇತ್ರ ಚುನಾವಣೆಯಲ್ಲಿ ಭಾರಿ ಸ್ಪರ್ಧೆ ಏರ್ಪಟ್ಟಿದೆ.

Karnataka MLC election highlights
ಎಂಎಲ್​ಸಿ ಚುನಾವಣೆ

By

Published : Jun 12, 2022, 6:32 PM IST

ಬೆಳಗಾವಿ: ವಾಯವ್ಯ ಶಿಕ್ಷಕ ಕ್ಷೇತ್ರ ಚುನಾವಣೆಯಲ್ಲಿ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ವಿರೋಧಿ ಅಲೆಗೆ ನುಲುಗಿದ್ದರೆ ಇತ್ತ ಕಾಂಗ್ರೆಸ್ ಅಭ್ಯರ್ಥಿಗೆ ಬಂಡಾಯದ ಬಿಸಿ ತಾಗಿದೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಪಕ್ಷೇತರ ಅಭ್ಯರ್ಥಿಯೂ ಪ್ರಭಾವಿ ಆಗಿರುವ ಕಾರಣಕ್ಕೆ ಈ ಚುನಾವಣಾ ಕಣ ತ್ರಿಕೋನ ಸ್ಪರ್ಧೆಗೆ ವೇದಿಕೆಯಾಗಿದೆ.

ಈ ಹಿಂದೆ ಪಕ್ಷೇತರ ಅಭ್ಯರ್ಥಿಗಳ ಹಿಡಿತದಲ್ಲಿದ್ದ ವಿಧಾನಪರಿಷತ್ ವಾಯವ್ಯ ಕ್ಷೇತ್ರವನ್ನು ಕಳೆದೆರಡು ಚುನಾವಣೆಗಳಿಂದ ಬಿಜೆಪಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಮೂರನೇ ಬಾರಿಯೂ ಗೆಲುವಿನ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಕಾಂಗ್ರೆಸ್, ಜೆಡಿಎಸ್ ಪ್ರಭಾವಿ ಅಭ್ಯರ್ಥಿಗಳ ಸ್ಪರ್ಧೆ ಅಡ್ಡಿಯಾಗಿದೆ. ಆದರೂ ಗೆಲುವು ತಮ್ಮದಾಗಿಸಿಕೊಳ್ಳಲು ಬಿಜೆಪಿ ವಲಯದಲ್ಲಿ ಇನ್ನಿಲ್ಲದ ಕಸರತ್ತು ನಡೆಸಲಾಗಿದೆ. ಸಾಮಾನ್ಯವಾಗಿ ಶಿಕ್ಷಕರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿಯೇ ನಡೆಯುತ್ತಿದ್ದ ಚುನಾವಣೆಗೆ ಈಗ ಸ್ವತಃ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಅಖಾಡಕ್ಕೆ ಇಳಿದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹೇಗಿದೆ ವಾಯವ್ಯ ಶಿಕ್ಷಕ ಕ್ಷೇತ್ರದ ರಣಕಣ? ಎಬಿವಿಪಿ ಮೂಲಕ ರಾಜಕೀಯಕ್ಕೆ ಬಂದವರಲ್ಲಿ ಅರುಣ್ ಶಹಾಪುರ ಕೂಡ ಒಬ್ಬರು. ಎಬಿವಿಪಿಯಲ್ಲಿ ಸಕ್ರಿಯರಾಗಿದ್ದ ಅರುಣ್ ಶಹಾಪುರ ಬಳಿಕ ವಾಯವ್ಯ ಕ್ಷೇತ್ರದ ಶಿಕ್ಷಕರ ಟಿಕೆಟ್ ಗಿಟ್ಟಿಸಿಕೊಂಡು ಎರಡು ಸಲ ಗೆದ್ದಿದ್ದಾರೆ. ಎದುರಾಳಿಗಳು ಪ್ರಬಲ ಇರುವ ಕಾರಣಕ್ಕೆ ಹ್ಯಾಟ್ರಿಕ್ ಗೆಲುವು ಅಷ್ಟೊಂದು ಸಲೀಸಲ್ಲ ಎಂಬುದು ಬಿಜೆಪಿಗೆ ಗೊತ್ತಿದೆ. ಎರಡು ಸಲ ಗೆದ್ದರೂ ಸಹ ಕೊಟ್ಟ ಆಶ್ವಾಸನೆಗಳ ವಿಷಯದಲ್ಲಿ ಅರುಣ್ ಶಹಾಪುರ ವಿರುದ್ಧ ಅಸಮಾಧಾನ ಕೇಳಿ ಬಂದಿವೆ.

ಮತ್ತೊಂದೆಡೆ ಕೆಲಸಗಾರ ಎನ್ನುವ ಬ್ರ್ಯಾಂಡ್ ಹೊಂದಿರುವ ಪ್ರಕಾಶ್ ಹುಕ್ಕೇರಿ 'ಶಿಕ್ಷಕನಲ್ಲ' ಎನ್ನುವ ಮಾತು ಚರ್ಚೆಯಲ್ಲಿದೆ. ಜೊತೆಗೆ ಅತಿಥಿ ಉಪನ್ಯಾಸಕರ ಅತಂತ್ರತೆ, ಶಿಕ್ಷಕರ ನೇಮಕಾತಿ, ವರ್ಗಾವಣೆ ಸಮಸ್ಯೆ, ಅನುದಾನಿತ ಶಾಲಾ ಶಿಕ್ಷಕರನ್ನು ಅನುದಾನಕ್ಕೆ ಒಳಪಡಿಸಲು ವಿಫಲವಾದ ಆಡಳಿತ ಮತ್ತು ವಿರೋಧ ಪಕ್ಷಗಳ ಮೇಲಿನ ಅಸಮಧಾನ ಶಿಕ್ಷಕರಲ್ಲಿದೆ. ಎನ್‍ಪಿಎಸ್ ರದ್ದುಪಡಿಸಿ ಮುಂಚಿನ ನಿವೃತ್ತಿ ವೇತನ ಮುಂದುವರೆಸುವ ಬೇಡಿಕೆಗಳು ಚುನಾವಣೆಯಲ್ಲಿ ನಿರ್ಣಾಯಕ ಅಂಶಗಳೆನ್ನುವಂತೆ ಕಂಡು ಬರುತ್ತಿದ್ದರೂ, ಬೇಡಿಕೆಗಳ ಈಡೇರಿಕೆಗೆ ಪಟ್ಟುಹಿಡಿಯಬೇಕಿದ್ದ ಶಿಕ್ಷಕರ ಸಂಘಟನೆಗಳು ಒಡೆದು ಚೂರಾಗಿರುವುದು ಅಭ್ಯರ್ಥಿಗಳಿಗೆ ಪ್ಲಸ್​ ಪಾಯಿಂಟ್ ಆಗಿದೆ.

ಬಿ.ಎನ್. ಬನ್ನೂರ ಕಳೆದ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಪರಾಭವಗೊಂಡಿದ್ದರು. ಕಾಂಗ್ರೆಸ್​ನ ಟಿಕೆಟ್ ನಿರೀಕ್ಷೆಯಲ್ಲಿದ್ದ ಎನ್.ಬಿ ಬನ್ನೂರ ಟಿಕೆಟ್ ಮಿಸ್ ಆಗುತ್ತಿದ್ದಂತೆ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಸತತ ಎರಡು ಸಲ ಸೋತಿರುವ ಎನ್.ಬಿ. ಬನ್ನೂರ ಬಗ್ಗೆ ಕ್ಷೇತ್ರದಲ್ಲಿ ಅನುಕಂಪದ ಅಲೆಯಿದೆ.

ಈ ಬಾರಿ ಜೆಡಿಎಸ್ ಚಂದ್ರಶೇಖರ ಲೋನಿಗೆ ಟಿಕೆಟ್ ನೀಡಿದ್ದು ಅವರೀಗ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಆದರೆ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಯ ನಡುವೆಯೇ ತ್ರೀಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ವಿರೋಧಿ ಅಲೆ ಎದುರಿಸಬಹುದೆಂಬ ಕಾರಣಕ್ಕೆ ಕಾಂಗ್ರೆಸ್ ಪ್ರಭಾವಿ ನಾಯಕ ಪ್ರಕಾಶ ಹುಕ್ಕೇರಿಗೆ ಟಿಕೆಟ್ ನೀಡಿದೆ.

ಹ್ಯಾಟ್ರಿಕ್ ಗೆಲುವಿಗೆ ಹುಕ್ಕೇರಿ ಸವಾಲ್:2011 ಮತ್ತು 2016 ರ ಚುನಾವಣೆಗಳ ಗೆಲುವಿನೊಂದಿಗೆ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಇದೀಗ ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದ್ದಾರೆ. ಶಹಾಪುರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲೆಂದೇ ಕಾಂಗ್ರೆಸ್ ಅಳೆದು ತೂಗಿ ಟಿಕೆಟ್ ಘೋಷಿಸಿದೆ. ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕ, ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಬಗೆಗಿದ್ದ ವಿರೋಧಿ ಅಲೆಯ ಕಾರಣಕ್ಕೆ ಕಾಂಗ್ರೆಸ್ ಪ್ರಭಾವಿ ನಾಯಕ ಪ್ರಕಾಶ ಹುಕ್ಕೇರಿಗೆ ಟಿಕೆಟ್ ನೀಡಿತ್ತು. ಆದರೀಗ ಎನ್.ಬಿ. ಬನ್ನೂರ ಸ್ಪರ್ಧೆ ಕಾಂಗ್ರೆಸ್ಸಿನ ಆತಂಕಕ್ಕೆ ಕಾರಣವಾಗಿದೆ. 25 ಸಾವಿರಕ್ಕೂ ಅಧಿಕ ಮತದಾರರನ್ನು ಹೊಂದಿರುವ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ವ್ಯಾಪ್ತಿ ಹೊಂದಿರುವ ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮೂರೂ ಜಿಲ್ಲೆಗಳಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಬೆಂಬಲವೇ ನಿರ್ಣಾಯಕ.

ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಅವರ ವಿಜಯಪುರದ ಬಿಎಲ್‍ಡಿ ಸಂಸ್ಥೆ ಸಹಜವಾಗಿ ಪ್ರಕಾಶ ಹುಕ್ಕೇರಿ ಅವರನ್ನು ಬೆಂಬಲಿಸುತ್ತಿದ್ದರೆ, ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆಯ ಬಾಗಲಕೋಟೆಯ ಬಸವೇಶ್ವವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅವರ ಮಾತೃಪಕ್ಷದ ಅಭ್ಯರ್ಥಿ ಅರುಣ್ ಶಹಾಪುರ ಪರ ನಿಲ್ಲುವ ಸಾಧ್ಯತೆ ಹೆಚ್ಚು. ಇನ್ನೊಂದು ಪ್ರಬಲ ಶಿಕ್ಷಣ ಸಂಸ್ಥೆ ಎನಿಸಿಕೊಂಡಿರುವ ಬೆಳಗಾವಿಯ ಕೆಎಲ್‍ಇ ಸಂಸ್ಥೆ ಈಗ ನಿರ್ಣಾಯಕ ಸ್ಥಾನದಲ್ಲಿದೆ. ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಪುತ್ರಿ ಡಾ. ಪ್ರೀತಿ ಕೋರೆಗೆ ಬಿಜೆಪಿ ಟಿಕೆಟ್ ಕೇಳಿದ್ದರಾದರೂ ಪಕ್ಷ ಅರುಣ್ ಶಹಾಪುರ ಅವರಿಗೆ ಮಣೆ ಹಾಕಿದೆ. 3 ಸಾವಿರ ಮತಗಳನ್ನು ಹೊಂದಿರುವ ಕೆಎಲ್‍ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಕಾಂಗ್ರೆಸ್ಸಿನ ಜೊತೆಗಿದ್ದರೆ, ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಬಿಜೆಪಿ ಜೊತೆಗಿದ್ದಾರೆ. ಹೀಗಾಗಿ ಕೆಎಲ್‍ಇ ಸಂಸ್ಥೆ ಯಾರಿಗೆ ಬೆಂಬಲ ಸೂಚಿಸುತ್ತದೆ ಎನ್ನುವುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಕ್ಷೇತ್ರದಲ್ಲಿ ಈವರೆಗೆ ಗೆದ್ದವರು ಯಾರು? 13 ಅಭ್ಯರ್ಥಿಗಳು ಸ್ಪರ್ಧಿಸಿದ್ದ 2016ರ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎನ್.ಬಿ. ಬನ್ನೂರ ಕೊನೆ ಕ್ಷಣದವರೆಗೂ ಗೆಲುವು ಕಸಿದಿಟ್ಟುಕೊಂಡಿದ್ದರೂ ಅಂತಿಮ 12ನೇ ಸುತ್ತಿನಲ್ಲಿ ಬಿಜೆಪಿಯ ಅರುಣ್ ಶಹಾಪುರ 1,866 ಮತಗಳ ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದ್ದರು. 2010ರಲ್ಲೂ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಪೈಪೋಟಿಯಿಂದ ಅರುಣ್ ಶಹಾಪುರ ಅಂತಿಮ ಸುತ್ತಿನಲ್ಲಿಯೇ ಗೆದ್ದಿದ್ದರು. 2004ರಲ್ಲಿ ವಿಜಯಪುರ ತಿಕೋಟಾದ ಪಕ್ಷೇತರ ಅಭ್ಯರ್ಥಿ ಜಿ.ಕೆ.ಪಾಟೀಲ ರಾಷ್ಟ್ರೀಯ ಪಕ್ಷಗಳಿಗೆ ಪೆಟ್ಟುಕೊಟ್ಟು ಗೆದ್ದು ಬಂದಿದ್ದರು. ಅದಕ್ಕೂ ಮುಂಚೆ ಮರಾಠಿ-ಕನ್ನಡ ಭಾಷಾ ಗೊಂದಲದ ಪ್ರಯೋಜನ ಪಡೆದ ಮಹಾರಾಷ್ಟ್ರ ಮೂಲದ ಬೆಳಗಾವಿ ನಗರದಲ್ಲಿ ಶಿಕ್ಷಕರಾಗಿದ್ದ ಎಸ್.ಎಸ್.ಪೂಜಾರಿ 1986 ರಿಂದ ಸತತ ಮೂರು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದರು.

2016ರ ಚುನಾವಣೆ: 26,960 ಮತದಾರರನ್ನು ಹೊಂದಿದ್ದ 2016ರ ಚುನಾವಣೆಯಲ್ಲಿ 12,378 ಮತದಾರರಿದ್ದ ಬೆಳಗಾವಿ ಜಿಲ್ಲೆಯಲ್ಲಿ 6,650 ಮತದಾರರು (ಶೇ.53.72) ಮತ ಚಲಾಯಿಸಿದ್ದರು. 6,241 ಮತದಾರರಿದ್ದ ಬಾಗಲಕೋಟೆ ಜಿಲ್ಲೆಯಲ್ಲಿ 3,823 ಮತ (ಶೇ.61) ಚಲಾವಣೆಗೊಂಡಿದ್ದವು. 8,341 ಮತದಾರರಿದ್ದ ವಿಜಯಪುರ ಜಿಲ್ಲೆಯಲ್ಲಿ 4,381 ಮತದಾರರು (ಶೇ.52.52) ಹಕ್ಕು ಚಲಾಯಿಸಿದ್ದರು. ಒಟ್ಟು 26,960 ಮತದಾರರ ಪೈಕಿ 14,854 ಮತಗಳು (ಶೇ.55.10) ಚಲಾವಣೆಗೊಂಡಿದ್ದವು.

ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ 6,784 ಮತಗಳಿಸಿ ಜಯ ಗಳಿಸಿದ್ದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಎನ್.ಬಿ.ಬನ್ನೂರ 4,918, ಪಕ್ಷೇತರ ಚಂದ್ರಶೇಖರ ಲೋನಿ 1,361 ಮತ, ಜೆಡಿಎಸ್‍ನ ಶಿವಲಿಂಗಪ್ಪ ಅಂಗಡಿ 768, ಪಕ್ಷೇತರ ಅಭ್ಯರ್ಥಿ ಅಡವಯ್ಯ ಹಿರೇಮಠ 969, ಅರವಿಂದ ದಳವಾಯಿ 482, ಶಿವಾನಂದ ಕಲ್ಲೂರ 137, ಅಶೋಕ ಗಂಗಣ್ಣವರ 92, ಶಿವಪುತ್ರಪ್ಪ ತೇರದಾಳ 27, ಅಪ್ಪಾಸಾಹೇಬ ಕುರಣೆ 11, ಬಸವಣ್ಣೆಪ್ಪ ಪೂಜಾರಿ 8, ಶ್ರೀನಿಕ್ ಜಾಂಗಟೆ 4, ಅಪ್ಪಾಸಾಹೇಬ ಶೇಡಬಾಳೆ 4 ಮತಗಳಿಸಿದ್ದರು. 38 ನೋಟಾ ಮತ್ತು 3,137 ಮತಗಳು ತಿರಸ್ಕೃತಗೊಂಡಿದ್ದವು.

ಎಲ್ಲಿ ಎಷ್ಟು ಮತದಾರರು?ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಕ್ಷೇತ್ರದಲ್ಲಿ 25,388 ಮತದಾರರಿದ್ದಾರೆ. ಗಡಿ ಜಿಲ್ಲೆ ಬೆಳಗಾವಿ ಅತಿಹೆಚ್ಚು ಮತದಾರರನ್ನು ಹೊಂದಿದೆ. 13,287 ಮತದಾರರು ಬೆಳಗಾವಿಯಲ್ಲಿದ್ದು, ಇದರಲ್ಲಿ 8573 ಪುರುಷರು, 4714 ಮಹಿಳಾ ಮತದಾರರಿದ್ದಾರೆ. 5173 ಮತದಾರರಿರುವ ಬಾಗಲಕೋಟೆ ಜಿಲ್ಲೆಯಲ್ಲಿ 3680 ಪುರುಷರು ಹಾಗೂ 1418 ಮಹಿಳಾ ಮತದಾರರಿದ್ದಾರೆ. 6928 ಮತದಾರರಿರುವ ವಿಜಯಪುರದಲ್ಲಿ 4985 ಪುರುಷರು ಹಾಗೂ 1943 ಮಹಿಳಾ ಮತದಾರರಿದ್ದಾರೆ.

ABOUT THE AUTHOR

...view details