ಚಿಕ್ಕೋಡಿ:ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡುವ ವಿಚಾರವಾಗಿ ಮಹಾ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಷರತ್ತುಗಳನ್ನ ವಿಧಿಸಿದ್ದು, ಉಭಯ ರಾಜ್ಯಗಳ ಹೊಂದಾಣಿಕೆ ಪ್ರಕ್ರಿಯೆಗೆ ವಿಘ್ನ ಉಂಟಾಗಿದೆ. ನದಿ ತೀರದ ಜನರು ಹನಿ ನೀರಿಗಾಗಿ ಹಾತೊರೆಯುತ್ತಿದ್ದಾರೆ.
ಕೃಷ್ಣಾ ನದಿ ಹಾದು ಹೋಗುವ ರಾಜ್ಯದ ಬೆಳಗಾವಿ (ಚಿಕ್ಕೋಡಿ ವಿಭಾಗ), ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಬಹುಪಾಲು ಪ್ರದೇಶ ಕುಡಿಯಲು ನದಿ ನೀರನ್ನೇ ಅವಲಂಬಿಸಿದ್ದು, ಪ್ರತಿ ವರ್ಷ ಬೇಸಿಗೆಯಲ್ಲಿ ಕೃಷ್ಣಾ ನದಿ ನೀರು ಬತ್ತುವುದರಿಂದ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಹರಿಸಲಾಗುತ್ತಿತ್ತು. ಕಳೆದ ಎರಡು ವರ್ಷ ಬೇಸಿಗೆಯಲ್ಲಿ ಸುಮಾರು ಆರೂವರೆ ಟಿಎಂಸಿ ನೀರು ಬಿಟ್ಟಿದ್ದ ಮಹಾರಾಷ್ಟ್ರ ಸರ್ಕಾರ ಈ ಬಾರಿ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ ಷರತ್ತು ವಿಧಿಸಿದೆ.
ಕೃಷ್ಣಾ ನದಿಗೆ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ನಿರ್ಧಾರ ಕೈಗೊಳ್ಳದೇ ಇದ್ದರಿಂದ ಈಗ ಕೃಷ್ಣಾ ತೀರದಲ್ಲಿ ಹನಿ ನೀರಿಗೂ ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ. ಷರತ್ತಿಗೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ನಡುವೆ ಹೊಂದಾಣಿಕೆ ಪ್ರಕ್ರಿಯೆಯೇ ನಡೆಯದಿದ್ದರಿಂದ ರಾಜ್ಯದ ಕೃಷ್ಣಾ ತೀರ ನೀರಿಲ್ಲದೆ ಬರಡಾಗಿದೆ. ನದಿ ಪಾತ್ರದ ಜನರು ಬಿಂದಿಗೆ ನೀರಿಗಾಗಿ 4-5 ಕಿ.ಮೀ. ದೂರ ಹೋಗುವ ದಾರುಣ ಸ್ಥಿತಿ ಸೃಷ್ಟಿಯಾಗಿದೆ.
ಇತ್ತ ಮಹಾರಾಷ್ಟ್ರ ಮಾತ್ರ ತನ್ನ ರಾಜ್ಯದ ಗಡಿ ಗ್ರಾಮಗಳಿಗಾಗಿ ಕೊಯ್ನಾ ಜಲಾಶಯದಿಂದ ಎರಡು ಬಾರಿ ಕೃಷ್ಣಾ ನದಿಗೆ ಸುಮಾರು 0.900 ಕ್ಯೂಸೆಕ್ ನೀರು ಬಿಟ್ಟಿದೆ. ಕರ್ನಾಟಕದ ಜಿಲ್ಲೆಗಳಿಗೆ ಬಿಡುವಷ್ಟು ನೀರು ಕೊಯ್ನಾ ಜಲಾಶಯದಲ್ಲಿ ಸಂಗ್ರಹ ಇದ್ದರೂ ಸಹ ಉಭಯ ರಾಜ್ಯಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದ ಕೃಷ್ಣೆಗೆ ನೀರು ಸೇರುತ್ತಿಲ್ಲ.
ಏನಿದು ಮಹಾ ಷರತ್ತು?
ಕೃಷ್ಣಾ ನದಿಗೆ ಮಹಾರಾಷ್ಟ್ರದಲ್ಲಿ ಕೊಯ್ನಾ ಜಲಾಶಯ ನಿರ್ಮಿಸಲಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಈ ಜಲಾಶಯದಿಂದ ರಾಜ್ಯಕ್ಕೆ ನಾಲ್ಕು ಟಿಎಂಸಿ ನೀರಿನ ಬೇಡಿಕೆ ಇದೆ. ಕೊಯ್ನಾದಿಂದ ನೀರು ಕೊಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿದೆ. ಆದರೆ, ಅದಕ್ಕೆ ಪ್ರತಿಯಾಗಿ ತಮ್ಮದೇ ರಾಜ್ಯದ ಜತ್ತ, ಸೊಲ್ಲಾಪುರ ಪ್ರದೇಶಗಳಿಗೆ ಆಲಮಟ್ಟಿ ಜಲಾಶಯದಿಂದ ನೀರು ಬಿಡಬೇಕು. ಈ ಬಗ್ಗೆ ಕಾಯಂ ಒಡಂಬಡಿಕೆ ಆಗಬೇಕು ಎಂದು ಬೇಡಿಕೆ ಇಟ್ಟಿದೆ.
ಅಸಲಿಗೆ ಈ ಪ್ರಸ್ತಾಪ 2017ರಲ್ಲಿಯೇ ಇತ್ತು. ಅದಕ್ಕೆ ಕರ್ನಾಟಕ ಸರ್ಕಾರವೂ ಒಪ್ಪಿತ್ತು. ಆದರೆ, ತಾಂತ್ರಿಕ ಪ್ರಕ್ರಿಯೆ ನಡೆಯದೆ ಈಗ ಸಮಸ್ಯೆ ಎದುರಾಗಿದೆ. ಈಗಾಗಲೇ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಜಮಖಂಡಿ ಶಾಸಕ ಆನಂದ ನ್ಯಾಮಗೌಡರ ಅವರು ಮಹಾರಾಷ್ಟ್ರ ಸರ್ಕಾರದ ನೀರಾವರಿ ಸಚಿವ ಗಿರೀಶ್ ಮಹಾಜನ ಅವರನ್ನು ಭೇಟಿಯಾಗಿ ಕೃಷ್ಣಾ ತೀರದ ಜನರಿಗೆ ಇರುವ ನೀರಿನ ಅಭಾವನ್ನು ವಿವರಿಸಿ ಕೃಷ್ಣಾ ನದಿಗೆ ಹರಿಸಬೇಕೆಂದು ಮನವಿ ಮಾಡಿದ್ದಾರಂತೆ. ಬಿಜೆಪಿ ನಾಯಕರು ಸಹ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್ ಅವರಿಗೆ ನದಿಗೆ ನೀರು ಬಿಡುವಂತೆ ಮನವಿ ಮಾಡಿದ್ದಾರಂತೆ.