ಬೆಳಗಾವಿ: ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಈ ಭಾಗದ ಪ್ರಭಾವಶಾಲಿ ನಾಯಕರಾಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬೆಳಗಾವಿಯ ಸುರೇಶ್ ಅಂಗಡಿ ಅವರ ನಿವಾಸದಲ್ಲಿ ಮಾತನಾಡಿದ ಅವರು, ಅಂಗಡಿ ಅವರು ನನ್ನ ಮಾರ್ಗದರ್ಶಕರಾಗಿದ್ದರು. ಅಲ್ಲದೇ ಅವರು ನನ್ನ ಹಿರಿಯ ಅಣ್ಣನಂತಿದ್ದರು. ಅವರು ವಿಧಿವಶರಾಗಿದ್ದಾಗ ನಾನು ಕ್ವಾರೆಂಟೈನ್ನಲ್ಲಿದ್ದೆ. ಹೀಗಾಗಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬೆಳಗಾವಿಗೆ ಬಂದಿದ್ದೇನೆ. ಸುರೇಶ್ ಅಂಗಡಿಯವರು ಮುಂಬೈ ಕರ್ನಾಟಕ ಭಾಗದಲ್ಲಿ ಓರ್ವ ಪ್ರಭಾವಶಾಲಿ ನಾಯಕರಾಗಿದ್ದರು ಎಂದರು.
ಸುರೇಶ್ ಅಂಗಡಿ ಮನೆಗೆ ನಳಿನ್ ಕುಮಾರ್ ಕಟೀಲ್ ಭೇಟಿ ಈ ಭಾಗದಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದ್ದರು. ಪಕ್ಷ ನಿಷ್ಠೆ, ಸಿದ್ದಾಂತವನ್ನು ಸುರೇಶ್ ಅಂಗಡಿಯವರನ್ನು ನೋಡಿ ಕಲಿಯಬೇಕು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ಹತ್ತಾರು ಸಚಿವರು ಮಾಡಿದ್ದಕ್ಕಿಂತ ಹೆಚ್ಚು ಕೆಲಸ ಮಾಡಿದ್ದರು. ರಾಜ್ಯಕ್ಕೆ ಅತೀ ಹೆಚ್ಚು ಅನುದಾನವನ್ನು ತಂದಿದ್ದರು. ಸುರೇಶ್ ಅಂಗಡಿ ಸ್ಮಾರಕ ಮತ್ತು ಬೆಳಗಾವಿ ಯಶವಂತಪುರ ರೈಲಿಗೆ ಅಂಗಡಿ ಅವರ ಹೆಸರಿಡುವ ವಿಚಾರ ಸರ್ಕಾರದ ಮುಂದೆ ಇದೆ. ಈ ಸಂಬಂಧ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಬಿಜೆಪಿ ಪಕ್ಷ ಪೂರ್ತಿ ಸುರೇಶ್ ಅಂಗಡಿ ಕುಟುಂಬದ ಜತೆಗಿದೆ ಎಂದರು.
ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ ನಳಿನ್ ಕುಮಾರ್ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ತಾಯಿ ಸೋಮವ್ವ, ಪತ್ನಿ ಮಂಗಳಾ, ಪುತ್ರಿ ಶೃದ್ಧಾ ಅವರಿಗೆ ಸಾಂತ್ವನ ಹೇಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದು ಅಂಗಡಿ ಅವರ ಅಭಿಮಾನಿಗಳು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಮನವಿ ಮಾಡಿಕೊಂಡರು. ಸುರೇಶ್ ಅಂಗಡಿ ನಿವಾಸ ಬಳಿ ನಳಿನ್‌ಕುಮಾರ್ ಕಟೀಲ್‌ಗೆ ಮನವಿ ಸಲ್ಲಿಸಲಾಯಿತು. ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಸುರೇಶ್ ಅಂಗಡಿ ಒಳ್ಳೆಯ ಸೇವೆ ಮಾಡಿದ್ದರು. ಅವರ ಅಂತಿಮ ದರ್ಶನ ಪಡೆಯುವ ಭಾಗ್ಯ ನಮಗೆ ಸಿಗಲಿಲ್ಲ. ಮುಂಬರುವ ಉಪಚುನಾವಣೆಯಲ್ಲಿ ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದ ನಳಿನ್‌ಕುಮಾರ್ ಕಟೀಲ್ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಭರವಸೆ ನೀಡಿದರು.