ಬೆಳಗಾವಿ:ಇಲ್ಲಿ ನಡೆಯುತ್ತಿರುವ ಯುವ ಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್ ನಾಲ್ಕನೇ ಖಾತರಿಯನ್ನು ಘೋಷಿಸಿದ್ದು, ಯುವ ಮತದಾರರಿಗೆ ಮಣೆ ಹಾಕಿದೆ. ನಿರುದ್ಯೋಗ ಯುವಕರಿಗೆ ನೆರವು ನೀಡಲು "ಯುವ ನಿಧಿ" ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ಪಕ್ಷ ಘೋಷಣೆ ಮಾಡಿದೆ.
ರಾಜ್ಯದ ಯುವಕರಿಗೆ ನಿರುದ್ಯೋಗ ಭತ್ಯೆಯಾಗಿ ಯುವ ನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರ ಯುವಕ/ಯುವತಿಯರಿಗೆ 2 ವರ್ಷಗಳವರೆಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಕಾಂಗ್ರೆಸ್ ಹೇಳಿದೆ.
ಇದಕ್ಕೂ ಮೊದಲು ಕಾಂಗ್ರೆಸ್, ಕುಟುಂಬದ ಯಜಮಾನಿಗೆ 2 ಸಾವಿರ ರೂಪಾಯಿ, ಪ್ರತಿ ಮನೆಗೆ 200 ಯೂನಿಟ್ವರೆಗೂ ವಿದ್ಯುತ್ ಉಚಿತ, 10 ಕೆಜಿ ಅಕ್ಕಿ ಘೋಷಣೆಯನ್ನು ಮಾಡಿತ್ತು. ಇಂದು ನಾಲ್ಕನೇ ಗ್ಯಾರಂಟಿಯಾಗಿ ನಿರುದ್ಯೋಗಿ ಯುವ ಜನತೆಗೆ 3 ಸಾವಿರ ರೂಪಾಯಿ ನೀಡುವುದಾಗಿ ಹೇಳಿದೆ.
ಪ್ರತಿ ತಿಂಗಳು ಭತ್ಯೆ:ಪದವಿ, ಡಿಪ್ಲೋಮಾ ವ್ಯಾಸಂಗ ಮಾಡಿ ಉದ್ಯೋಗವಿಲ್ಲದ ಯುವಕ, ಯುವಕರಿಗೆ ಯುವ ನಿಧಿಯಡಿ ಪ್ರತಿ ತಿಂಗಳು ಭತ್ಯೆ ನೀಡಲಾಗುವುದು. ಇದರಲ್ಲಿ ಪದವೀಧರರಿಗೆ 3 ಸಾವಿರ, ಡಿಪ್ಲೋಮಾ ವ್ಯಾಸಂಗ ಮಾಡಿದವರಿಗೆ 1500 ರೂಪಾಯಿ ಭತ್ಯೆ ಸಿಗಲಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಗ್ಯಾರಂಟಿ ಘೋಷಣೆ ಮಾಡಲಾಯಿತು.
ರಾಜ್ಯದಲ್ಲಿರುವುದು ಭ್ರಷ್ಟ ಸರ್ಕಾರ:ಕರ್ನಾಟಕ ಸರ್ಕಾರ ದೇಶದಲ್ಲಿಯೇ ದೊಡ್ಡ ಭ್ರಷ್ಟ ಸರ್ಕಾರವಾಗಿದೆ. 40% ಕಮಿಷನ್ ಪಡೆದು ಸರ್ಕಾರ ನಡೆಸಲಾಗುತ್ತಿದೆ. ಗುತ್ತಿಗೆದಾರರೇ ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೆ ಪ್ರಧಾನಿಗಳು ಮಾತ್ರ ಇಲ್ಲಿಯವರೆಗೂ ಈ ಬಗ್ಗೆ ಉತ್ತರ ನೀಡಿಲ್ಲ. ಮೈಸೂರು ಸ್ಯಾಂಡಲ್ ಸೋಪಿನಲ್ಲೂ ಭ್ರಷ್ಟಾಚಾರವಾಗಿದೆ. ಎಂಎಲ್ಎ ಮಗನ ಬಳಿ ಹಣ ಸಿಕ್ಕಿದೆ. ಅವರನ್ನು ಉಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಮಾಡಾಳು ಪ್ರಕರಣವನ್ನು ಉಲ್ಲೇಖಿಸದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಜನರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ದೊಡ್ಡ ಭಷ್ಟ ಕೂಟವಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ನಫರತ್ ಕೆ ಬಜಾರ್ ಮೇ ಮೊಹಬ್ಬತ್ ಕಿ ದುಖಾನ್ ತೆರೆಯಲಾಗಿದೆ ಎಂದು ರಾಹುಲ್ ಹೇಳಿದರು.
ಭಾರತ್ ಜೋಡೋ ಯಾತ್ರೆಯಲ್ಲೂ ಕೂಡ ಇದನ್ನೇ ಹೇಳಿದ್ದರು. ಯಾತ್ರೆಯಲ್ಲಿ ಹೆಚ್ಚಿನ ಜನರು ಭಾಗಿಯಾಗಿ ಸಫಲ ಮಾಡಿದ್ದೀರಿ. ಇಡೀ ದೇಶಕ್ಕೆ ಒಂದು ಸಂದೇಶ ರವಾನೆಯಾಗಿದೆ. ದೇಶ ಎಲ್ಲರದ್ದು, ಕೇವಲ ಒಂದಿಬ್ಬರದು ಅಲ್ಲ. ಇದು ಅದಾನಿಯವರ ದೇಶವಲ್ಲ. ಪ್ರತಿ ರೈತ, ಮಹಿಳೆಯರು, ಬಡವರ ದೇಶವಾಗಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ:ಗೃಹಲಕ್ಷಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಘೋಷಿಸಿದೆ. ಕೇಂದ್ರದ ಮೋದಿ ಸರ್ಕಾರ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿತ್ತು. ದೇಶದಲ್ಲಿನ 50 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಅದನ್ನೇ ಸರ್ಕಾರ ಭರ್ತಿ ಮಾಡಿಲ್ಲ. ರಾಜ್ಯದಲ್ಲಿ 2.50 ಲಕ್ಷ ಉದ್ಯೋಗ ಖಾಲಿ ಇದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಹುದ್ದೆ ತುಂಬುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭರವಸೆ ನೀಡಿದರು.
ಈ ಚುನಾವಣೆ ರಾಜ್ಯಕ್ಕೆ ಬಹಳ ಮಹತ್ವದ್ದಾಗಿದೆ. ಮತ್ತು ದೇಶಕ್ಕೆ ಒಂದು ಸಂದೇಶ ನೀಡಲಿದೆ. ಹೀಗಾಗಿ ನಾವೆಲ್ಲಾ ಒಗ್ಗಟ್ಟಾಗಿ ಚುನಾವಣೆ ನಡೆಸಬೇಕು. ನಾನು ಅಧ್ಯಕ್ಷನಾದ ನಂತರ ಬೆಳಗಾವಿ ಮಣ್ಣಿಗೆ ಕಾಲಿಟ್ಟಿದ್ದೇನೆ. ಕಾಂಗ್ರೆಸ್ಗೆ ಬೆಳಗಾವಿ ಪವಿತ್ರ ಜಾಗವಾಗಿದೆ. 39ನೇ ಕಾಂಗ್ರೆಸ್ ಅಧಿವೇಶನ ನೂರು ವರ್ಷದ ಹಿಂದೆ ಮಹಾತ್ಮಾ ಗಾಂಧೀಜಿ ನಾಯಕತ್ವದಲ್ಲಿ ಇದೇ ನೆಲದಲ್ಲಿ ನಡೆದಿತ್ತು. ನನಗೆ ತಾವೆಲ್ಲಾ ಸೇರಿ ಈ ಸ್ಥಾನ ಕೊಟ್ಟಿದ್ದೀರಿ. ಅದಕ್ಕೆ ತಮಗೆಲ್ಲಾ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಗ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್, ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ, ಮಾಜಿ ಸಚಿವ ಎಚ್.ಕೆ.ಪಾಟೀಲ ಸೇರಿದಂತೆ ಶಾಸಕರು, ಮಾಜಿ ಶಾಸಕರು, ಮುಖಂಡರು, ಲಕ್ಷಾಂತರ ಕಾರ್ಯಕರ್ತರು ಯುವ ಕ್ರಾಂತಿ ಸಮಾವೇಶದಲ್ಲಿ ಸಾಕ್ಷಿಯಾದರು.
ಓದಿ:ಸಂಚಾರ ದಟ್ಟಣೆಯೇ ದೊಡ್ಡ ಸವಾಲು: ಯಾರಿಗೆ ಒಲಿಯಲಿದೆ ಕೆ.ಆರ್. ಪುರ ಕ್ಷೇತ್ರ?