ಕರ್ನಾಟಕ

karnataka

ETV Bharat / state

Electricity charges hike: ವಿದ್ಯುತ್ ದರ ಏರಿಕೆಗೆ ವಿರೋಧ, ಬೆಳಗಾವಿಯಲ್ಲಿ ಕೈಗಾರಿಕೆಗಳು ಬಂದ್, ಎಲೆಕ್ಟ್ರಿಕಲ್ ಬೈಕ್ ಅಣಕು ಶವಯಾತ್ರೆ - ಕರ್ನಾಟಕ ಚೇಂಬರ್ ಆಫ್ ಕಾಮರ್ಸ್

ವಿದ್ಯುತ್ ದರ ಏರಿಕೆ ವಿರೋಧಿಸಿ ಬಂದ್. ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಿದ ಕೈಗಾರಿಕೋದ್ಯಮಿಗಳು.

Electricity charges hike
ವಿದ್ಯುತ್ ದರ ಏರಿಕೆ ವಿರೋಧಿಸಿ ಬಂದ್

By

Published : Jun 22, 2023, 1:18 PM IST

Updated : Jun 22, 2023, 2:20 PM IST

ವಿದ್ಯುತ್ ದರ ಏರಿಕೆಗೆ ವಿರೋಧಿಸಿ ಪ್ರತಿಭಟನೆ

ಬೆಳಗಾವಿ:ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ಹುಬ್ಬಳ್ಳಿಯ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ನೀಡಿರುವ ಬಂದ್​ಗೆ ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೈಗಾರಿಕೆಗಳನ್ನು ಬಂದ್ ಮಾಡಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕೈಗಾರಿಕೋದ್ಯಮಿಗಳು ಎಲೆಕ್ಟ್ರಿಕಲ್ ಬೈಕ್ ಹೊತ್ತುಕೊಂಡು ಅಣಕು ಶವಯಾತ್ರೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

ಇಂದು ಬೆಳಗ್ಗೆ ಇಲ್ಲಿನ ಧರ್ಮವೀರ ಸಂಭಾಜಿ ವೃತ್ತ ಬಳಿ ಚೇಂಬರ್ ಆಫ್ ಕಾಮರ್ಸ್ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೇರಿದ ಜಿಲ್ಲೆಯ ಕೈಗಾರಿಕೋದ್ಯಮಿಗಳು ಲಿಂಗರಾಜ ರಸ್ತೆ, ಚನ್ನಮ್ಮ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು. ಇದೇ ವೇಳೆ ಎಲೆಕ್ಟ್ರಿಕಲ್ ಬೈಕ್ ಅನ್ನು ಹೆಗಲ ಮೇಲೆ ಹೊತ್ತುಕೊಂಡ ಪ್ರತಿಭಟನಾಕಾರರು ವಿದ್ಯುತ್ ದರ ಏರಿಸಿದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕರ್ನಾಟಕ ಸರ್ಕಾರದ ದೆಹಲಿಯ ಮಾಜಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಈಟಿವಿ ಭಾರತ ಜೊತೆಗೆ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದ ಜನರು ಮತ್ತು ಕೈಗಾರಿಕೋದ್ಯಮಿಗಳಿಗೆ ಶಾಕ್ ಕೊಟ್ಟಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು, ಮೊಂಡುತನದ ಹೇಳಿಕೆ ಕೊಡುವುದನ್ನು ಬಿಡಬೇಕು. ಭಂಡತನದ ಕಾನೂನುಗಳನ್ನು ಮಾಡಬೇಡಿ. ಇದರಿಂದ ಜನರಿಗೆ ಬಹಳಷ್ಟು ಸಮಸ್ಯೆಯಾಗುತ್ತದೆ. ತಕ್ಷಣವೇ ವಿದ್ಯುತ್ ದರ ಇಳಿಸಬೇಕೆಂದು ಆಗ್ರಹಿಸಿದರು.

ಬಳಿಕ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ರೋಹನ್ ಜವಳಿ ಮಾತನಾಡಿ, ಎಂಟು ದಿನಗಳಲ್ಲಿ ದರ ಇಳಿಸದಿದ್ದರೆ ಕೈಗಾರಿಕೆಗಳನ್ನು ಬಂದ್ ಮಾಡಿ ಪ್ರತಿಭಟಿಸುತ್ತೇವೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೆವು. ಹೀಗಾಗಿ ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ಜಿಲ್ಲೆಯ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು, ಉದ್ಯಮಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಒಂದು ಕಡೆ ಸರ್ಕಾರ ಎಲೆಕ್ಟ್ರಿಕಲ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದ್ದರೆ, ಮತ್ತೊಂದೆಡೆ ನಿಯಮ ಗಾಳಿಗೆ ತೂರಿ ಶೇ.30ರಿಂದ ಶೇ.60ಕ್ಕೆ ದರ ಏರಿಸುವ ಮೂಲಕ ನಮಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ನಾವು ಯಾವುದೇ ಕಾರಣಕ್ಕೂ‌ ಬಿಲ್ ಕಟ್ಟುವುದಿಲ್ಲ ಎಂದು ಎಚ್ಚರಿಸಿದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹೇಮೇಂದ್ರ ಪೋರವಾಲ್ ಮಾತನಾಡಿ, ಈ ಮಟ್ಟದಲ್ಲಿ ವಿದ್ಯುತ್ ದರ ಏರಿಸುವುದರಿಂದ ಕೈಗಾರಿಕೆಗಳನ್ನು ನಡೆಸಲು ಸಾಧ್ಯವೇ ಇಲ್ಲ. ಮೊನ್ನೆ ಹೆಸ್ಕಾಂ ಎಂಡಿ ಅವರ ಜೊತೆಗಿನ ಸಭೆಯಲ್ಲೂ ನಮ್ಮ ಸಮಸ್ಯೆ ಹೇಳಿಕೊಂಡಿದ್ದೇವೆ. 27 ಚೇಂಬರ್ ಆಫ್ ಕಾಮರ್ಸ್​ಗಳು ಬರುವ ಮೂರು ದಿನದಲ್ಲಿ ಸಭೆ ಮಾಡಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ ಎಂದರು.

ಕೆಲ ಕಾಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ ಕೈಗಾರಿಕೋದ್ಯಮಿಗಳ ಬಳಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆಗಮಿಸಿ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಉದ್ಯಮಿಗಳಾದ ಮಹಾದೇವ ಚೌಗುಲೆ, ಆನಂದ ದೇಸಾಯಿ, ಪ್ರಭಾಕರ ನಾಗರಮುನ್ನೋಳಿ, ಸಂದೀಪ ಬಾಗೇವಾಡಿ, ಸ್ವಪ್ನೀಲ್ ಶಹಾ, ಸಚಿನ ಸಬ್ನೀಸ್, ರಾಮ ಭಂಡಾರಿ, ಶರದ ಪಾಟೀಲ ಸೇರಿ ಮತ್ತಿತರರು ಇದ್ದರು. ಬೆಳಗಾವಿ ನಗರವೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಕೈಗಾರಿಕಾ ಘಟಕಗಳು ಇಂದು ಸಂಪೂರ್ಣವಾಗಿ ಬಂದ್ ಆಗಿದ್ದವು.

ಇದನ್ನೂ ಓದಿ: ಬರೋಬ್ಬರಿ 1,03,315 ರೂ ಬಿಲ್ ನೀಡಿದ ಜೆಸ್ಕಾಂ.. ಕೊಪ್ಪಳದಲ್ಲಿ ವಿದ್ಯುತ್ ಬಿಲ್ ನೋಡಿ ಶಾಕ್ ಆದ ವೃದ್ದೆ!

Last Updated : Jun 22, 2023, 2:20 PM IST

ABOUT THE AUTHOR

...view details