ಬೆಂಗಳೂರು/ಬೆಳಗಾವಿ: ರಾಜ್ಯದಲ್ಲಿ ಹೊಸದಾಗಿ ಆರು ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸುವ ಸಂಬಂಧ ವಿಧೇಯಕವನ್ನು ಸದನದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸೋಮವಾರ ಬೆಳಗಾವಿ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ.
ಆರು ವಿವಿಗಳು ಎಲ್ಲೆಲ್ಲಿ:ಬೆಂಗಳೂರಲ್ಲಿ ಟಿ.ಜಾನ್ ವಿಶ್ವವಿದ್ಯಾಲಯ, ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ, ಸಪ್ತಗಿರಿ ವಿಶ್ವವಿದ್ಯಾಲಯ, ಆಚಾರ್ಯ ವಿಶ್ವವಿದ್ಯಾಲಯ, ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ ವಿಶ್ವವಿದ್ಯಾಲಯ ಮತ್ತು ಬಳ್ಳಾರಿಯಲ್ಲಿ ಕಿಷ್ಕಂದಾ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆರು ವಿಶ್ವವಿದ್ಯಾಲಯಗಳ ಸ್ಥಾಪನೆ ಸಂಬಂಧ ವಿಧೇಯಕವನ್ನು ಅದಿವೇಶನದಲ್ಲಿ ಮಂಡಿಸಲಾಗುವುದು.
ಇದನ್ನೂ ಓದಿ: ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಶ್ರೀಕೃಷ್ಣದೇವರಾಯ ವಿವಿ ಪ್ರೊಫೆಸರ್ ಅಮಾನತು
ಕಲಾಪ ಸಲಹಾ ಸಮಿತಿಯಲ್ಲಿ ವಿಧೇಯಕ ಮಂಡನೆ ಬಗ್ಗೆ ಚರ್ಚೆ ನಡೆಸಬೇಕು. ಆದರೆ, ಈವರೆಗೆ ಚರ್ಚಿಸಿಲ್ಲ ಎನ್ನಲಾಗಿದೆ. ಈ ಹಿಂದೆಯೇ ಈ ಆರು ವಿಶ್ವವಿದ್ಯಾಲಯಗಳ ವಿಧೇಯಕ ಮಂಡನೆಯಾಗಬೇಕಿತ್ತು. ಆದರೆ, ಹಲವು ಸ್ಪಷ್ಟನೆಗಳನ್ನು ನೀಡಬೇಕಿರುವ ಕಾರಣ ತಡವಾಗಿದೆ. ಸಚಿವರ ಎಲ್ಲ ಪ್ರಶ್ನೆಗಳಿಗೆ ಉನ್ನತ ಶಿಕ್ಷಣ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ವಿಧೇಯಕ ಮಂಡನೆಗೆ ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಬಗ್ಗೆ ಸಂಸದ ಪ್ರತಾಪ್ ಸಿಂಹ, ಬಸನಗೌಡ ಯತ್ನಾಳ್ ತೀವ್ರ ಆಕ್ಷೇಪ ಹೊರಹಾಕಿದ್ದರು.
ವಿವಿ ಸ್ಥಾಪನೆ ಬಗ್ಗೆ ಯತ್ನಾಳ್ ಆಕ್ಷೇಪ:ಹೆಚ್ಚು ವಿಶ್ವವಿದ್ಯಾಲಯ ಏಕೆ ಸ್ಥಾಪಿತ್ತಾರೆ ಅರ್ಥ ಆಗುತ್ತಿಲ್ಲ. ಕುಲಪತಿಗಳನ್ನು ನೇಮಕ ಮಾಡಿ ಹಣ ತೆಗೆದುಕೊಳ್ಳುವುದು. ಕಟ್ಟಡ ಕಟ್ಟುವುದು, ಕಂಪ್ಯೂಟರ್ ಖರೀದಿ ಮಾಡುತ್ತಾರೆ. ಇದರ ಹಣ ಎಲ್ಲರಿಗೂ ಹೋಗ್ತಿದೆ. ಕುಲಪತಿ ಹುದ್ದೆ ಹಾಗೇ ಆಗಿದೆ. ಇದ್ದ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿ ಮಾಡುವುದು ಬಿಟ್ಟು ಹೊಸ ವಿವಿ ಸ್ಥಾಪನೆ ಮಾಡುತ್ತಿದ್ದಾರೆ. ಈಗಿರುವ ವಿಶ್ವವಿದ್ಯಾಲಗಳನ್ನು ಉನ್ನತೀಕರಿಸಲಿ. ಜಿಲ್ಲೆಗೊಂದು ವಿವಿ ಬದಲು, ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಮೊದಲು ಅಭಿಪ್ರಾಯಪಟ್ಟಿದ್ದರು.
ಇದನ್ನು ಓದಿ: ಮೀಸಲಾತಿ ವಿಚಾರವಾಗಿ ಸಿಎಂ ಆಣೆ ಮಾಡಿದ್ದಾರೆ: ಯತ್ನಾಳ್