ಬೆಂಗಳೂರು:ಏಪ್ರಿಲ್17 ರಂದು ನಡೆಯಲಿರುವ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ.
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ: ಬಿಜೆಪಿಯಿಂದ ಟಿಕೆಟ್ ಅನೌನ್ಸ್
21:30 March 25
ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಸುರೇಶ್ ಅಂಗಡಿ ಅವರಿಗೆ ಬಿಜೆಪಿ ಹೈಕಮಾಂಡದ ಟಿಕೆಟ್ ಪ್ರಕಟಿಸಿದೆ. ಮಸ್ಕಿ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಪ್ರತಾಪ್ ಗೌಡ ಪಾಟೀಲ್ ಹಾಗೂ ಬಸವ ಕಲ್ಯಾಣ ಕ್ಷೇತ್ರಕ್ಕೆ ಶರಣು ಸಲಗಾರ್ ಹೆಸರನ್ನು ಪ್ರಕಟಿಸಲಾಗಿದೆ.
ಬೆಳಗಾವಿ ಕ್ಷೇತ್ರಕ್ಕೆ ಶೆಟ್ಟರ್ ಕುಟಂಬ, ಕೋರೆ ಕುಟುಂಬದ ನಡುವೆ ಸ್ಪರ್ಧೆ ಇತ್ತಾದರೂ ಅನುಕಂಪದ ಆಧಾರದಲ್ಲಿ ಅಂಗಡಿ ಕುಟುಂಬಕ್ಕೆ ಬಿಜೆಪಿ ಮಣೆ ಹಾಕಿದೆ. ಇನ್ನು ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ ಎನ್ನುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೇಡಿಕೆಯನ್ನು ಪರಿಗಣಿಸಿ ಮಸ್ಕಿ ಕ್ಷೇತ್ರಕ್ಕೆ ಪ್ರತಾಪ್ ಗೌಡ ಪಾಟೀಲ್ ಅವರ ಹೆಸರನ್ನೇ ಪ್ರಕಟಿಸಲಾಗಿದೆ. ಇನ್ನು ಟಿಕೆಟ್ಗಾಗಿ ತೀವ್ರ ಜಿದ್ದಾಜಿದ್ದು ಏರ್ಪಟ್ಟಿದ್ದ ಬಸವಕಲ್ಯಾಣ ಕ್ಷೇತ್ರದಲ್ಲಿ ಕೊರೊನಾ ಸಮಯದಲ್ಲಿ ಜನರೊಂದಿಗೆ ಬೆರೆತು ಕೆಲಸಮಾಡಿ ಹೈಕಮಾಂಡ್ ಮೆಚ್ಚುಗೆಗೆ ಪಾತ್ರವಾಗಿದ್ದ ಶರಣು ಸಲಗಾರ್ಗೆ ಪಕ್ಷ ಟಿಕೆಟ್ ನೀಡಿದೆ.
ಇತ್ತೀಚೆಗಷ್ಟೇ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಘಟಕ ಹೈಕಮಾಂಡ್ಗೆ ಕಳಿಸಿ ಕೊಟ್ಟಿದ್ದರು. ಪಂಚರಾಜ್ಯಗಳ ಚುನಾವಣಾ ಪ್ರಚಾರದಿಂದಾಗಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿರಲಿಲ್ಲ, ಇಂದು ಸಭೆ ನಡೆಸಿದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ವಿವಿಧ ರಾಜ್ಯಗಳ ಅಭ್ಯರ್ಥಿಗಳ ಜೊತೆ ರಾಜ್ಯದ ಅಭ್ಯರ್ಥಿಗಳ ಹೆಸರನ್ನೂ ಅಂತಿಮಗೊಳಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.