ಬೆಳಗಾವಿ:ಜಿಲ್ಲೆಯ ಸುವರ್ಣ ಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಸಮಗ್ರ ಉತ್ತರ ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯಲ್ಲಿ ಸುಮಾರು 500 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಲಾಗಿರುವ ಸುವರ್ಣ ಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು. ಪ್ರತಿ ತಿಂಗಳು ಒಮ್ಮೆಯಾದರೂ ಸಚಿವ ಸಂಪುಟದ ಸಭೆ ನಡೆಸಬೇಕು. ಸುವರ್ಣ ಸೌಧದ ಎದುರು ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯಮಟ್ಟದ ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ 500 ಕೋಟಿ ರೂ.ಗಳ ವೆಚ್ಚದಲ್ಲಿ ಭವ್ಯವಾದ ಸುವರ್ಣ ಸೌಧ ನಿರ್ಮಾಣ ಮಾಡಿ 8 ವರ್ಷಗಳು ಕಳೆದಿದೆ. ಆದ್ರೆ ವರ್ಷದಲ್ಲಿ ಒಮ್ಮೆ ಕೇವಲ ಅಧಿವೇಶನಕ್ಕೆ ಸೌಧ ಉಪಯೋಗವಾಗುತ್ತಿತ್ತು. ಸೌಧಕ್ಕೆ ಬೆಂಗಳೂರಿನ ಪ್ರಮುಖ ಕಚೇರಿ ಸ್ಥಳಾಂತರ ಆಗಬೇಕು. ಈ ಮೂಲಕ ಇಡೀ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ರಾಜ್ಯ ಸರ್ಕಾರ ಸಹ ಅನೇಕ ಕಚೇರಿ ಸ್ಥಳಾಂತರ ಮಾಡುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸದ್ಯ ರಾಜ್ಯ ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದು, ಬೆಳಗಾವಿ ನಗರದ ಖಾಸಗಿ ಕಟ್ಟಡದಲ್ಲಿ ಇದ್ದ 23 ಕಚೇರಿಗಳನ್ನು ಸುವರ್ಣ ಸೌಧಕ್ಕೆ ಶಿಫ್ಟ್ ಮಾಡಲಾಗಿದೆ. ಧಾರವಾಡದಲ್ಲಿ ಇದ್ದ ಕರ್ನಾಟಕ ನೀರಾವರಿ ನಿಗಮವನ್ನು ಸಹ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಲಾಗಿದೆ. ಕೂಡಲೇ ಸರ್ಕಾರ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.