ಬೆಳಗಾವಿ :ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಿದ ವೃತ್ತಕ್ಕೆ ರಾಯಣ್ಣನ ಹೆಸರೇ ಇಡಬೇಕು ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕರ್ನಾಟಕಕ್ಕೂ ಶಿವಸೇನೆ ಎಂಇಎಸ್‌ಗೂ ಏನು ಸಂಬಂಧ?.. ಅವರ ಮಾತು ಕೇಳಿ ಸರ್ಕಾರ ಏಕೆ ಅಂಜಬೇಕು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಗುಲಾಮಗಿರಿ ಮಾಡ್ತೀರೇನ್ರಿ?..ಯಾಕ್ರೀ ಬೇಕು ಆ ಗುಲಾಮಗಿರಿತನ, ಕರ್ನಾಟಕದಲ್ಲಿ ಇದು ನಡೆಯಲ್ಲ. ಕರ್ನಾಟಕದ ಹಿತದೃಷ್ಟಿಯಿಂದ ವೋಟ್ ಬ್ಯಾಂಕ್ ರಾಜಕಾರಣ ಮಾಡಬೇಡಿ. ಶಿವಸೇನೆ ಬಾಲ ಕಟ್ ಮಾಡುವ ಬಗ್ಗೆ ನಿಮ್ಮ ಇಲಾಖೆಗೆ ಗೊತ್ತಿದೆ. ಅವ್ರು ಅದನ್ನ ಮಾಡಲಿ. ಕರ್ನಾಟಕ ಸ್ವಾಭಿಮಾನ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದರು.
ಸ್ಥಳೀಯ ನಾಯಕರು ವೋಟ್ ಬ್ಯಾಂಕ್‌ಗಾಗಿ 25 ವರ್ಷದಿಂದ ಮಾತನಾಡಲಿಲ್ಲ. ಅವ್ರು ಸರಿ ಇದ್ದಿದ್ರೆ ಅವರೇಕೆ ಇಷ್ಟೆಲ್ಲಾ ಬಾಲ ಬಿಚ್ಚುತ್ತಿದ್ರು... ಅವ್ರು ಸರಿ ಇಲ್ಲದ ಕಾರಣ ಇಷ್ಟೆಲ್ಲಾ ಆಗಿದೆ. ಶಿವಸೇನೆಯವರು ಎಷ್ಟು ಬಾರಿ ಬೆಳಗಾವಿಗೆ ಆಗಮಿಸಿ ಮರಾಠಿ ಮುಗ್ಧ ಯುವಕರಿಗೆ ಪ್ರಚೋದನೆ ಮಾಡ್ತಾರೆ. ಪೊಲೀಸ್ ಇಲಾಖೆ ಅವರನ್ನು ಬಗ್ಗು ಬಡಿಯಬೇಕು ಎಂದರು.
ಭಾರತ ಪಾಕ್ ಗಡಿಯಲ್ಲಿ ಆಗುವ ಗಲಭೆ ರೀತಿ ಇಲ್ಲಿನ ಯುವಕರನ್ನು ಉಪಯೋಗಿಸಿಕೊಂಡು ಎಂಇಎಸ್ ಹಾಗೂ ಶಿವಸೇನೆಯವ್ರು ಮಾಡ್ತಿದ್ದಾರೆ. ನೀವು ನಮ್ಮ ರಾಜ್ಯಕ್ಕೆ ಬಂದಿರುವ ಅತಿಥಿಗಳು.. ಮಾಲೀಕರಲ್ಲಾ..ಸೇವಕರು ನೀವು. ನಾವು ಕನ್ನಡಿಗರು ಇಲ್ಲಿನ ಮಾಲೀಕರು. ನೀವು ಅಲ್ಲಿಂದ ಬಂದೊರೋ ಬದುಕಲಿಕ್ಕೆ ಬಂದಿದ್ದೀರಿ ಅತಿಥಿಗಳಾಗಿ ಇರಬೇಕಷ್ಟೇ.. ಧಿಮಾಕು, ದೌಲತ್ತು.. ಗುಂಡಾಗಿರಿ ಮಾಡಿದ್ರೆ.. ಇದು ನಡೆಯೋದಿಲ್ಲ. ನಿಮ್ಮ ಸೊಕ್ಕನ್ನು ಅಡಿಗಿಸುವ ಶಕ್ತಿ ಕನ್ನಡಿಗರಿಗಿದೆ ಎಂದು ಎಂಇಎಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಯಣ್ಣ ಪ್ರತಿಮೆಗೆ ಯಾರ ದೊಣ್ಣೆನಾಯಕನ ಅಪ್ಪಣೆ ಬೇಡ ಎಂದು ಕರವೇ ಕಾರ್ಯಕರ್ತರಿಂದ ಮೂರ್ತಿ ಅನಾವರಣ ಮಾಡಲಾಗಿದೆ. ಈ ವಿವಾದಕ್ಕೆ ಕಾರಣರಾದವರನ್ನು ಬಗ್ಗು ಬಡಿಯಲೇಬೇಕು. ಎಂಇಎಸ್ ಇವತ್ತು ಸತ್ತ ಶವವಾಗಿದೆ, ಅದಕ್ಕೆ ಮರುಜೀವ ಕೊಡಲು ವಿವಾದ ಸೃಷ್ಟಿಯಾಗಿದೆ. ಇದಕ್ಕೆ ನಾವು ಯಾರೂ ಸಹ ಹೆದರಲ್ಲ. ತಕ್ಕ ಉತ್ತರ ಕೊಡ್ತೇವೆ.
ಶಿವಾಜಿ ಪ್ರತಿಮೆ ಇದ್ದಲ್ಲಿ ಶಿವಾಜಿ ಸರ್ಕಲ್ ಆಗಲಿ, ರಾಯಣ್ಣ ಪ್ರತಿಮೆ ಇದ್ದಲ್ಲಿ ರಾಯಣ್ಣ ಸರ್ಕಲ್ ಆಗಲಿ. ಇದಲ್ಲದೇ ಸುವರ್ಣಸೌಧ ಎದುರು ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣನ ಪ್ರತಿಮೆ ಸ್ಥಾಪಿಸಬೇಕು. ಬೆಳಗಾವಿ ವಿಚಾರದಲ್ಲಿ ನಾವು ವಿವಾದ ಸೃಷ್ಟಿ ಮಾಡೋ ಗಲಭೆಕೋರರಲ್ಲ. ಬೆಳಗಾವಿ ವಿಚಾರದಲ್ಲಿ ನಾವು ಸದಾ ಗಟ್ಟಿಯಾಗಿ ಉತ್ತರ ಕೊಟ್ಟಿದ್ದೇವೆ. ಪ್ರತಿಮೆ ಪ್ರತಿಷ್ಠಾಪಿಸಿದವರ ವಿರುದ್ಧ ಕೇಸ್ ಹಾಕಿದ್ದಾರೆ. ಕೇಸ್‌ಗೆ ಹೆದರಲ್ಲ. ಇನ್ನೂ ನೂರು ಕೇಸ್ ಹಾಕಿದರೂ ನಾವು ಹೆದರಲ್ಲ ಎಂದು ನಾರಾಯಣಗೌಡ ಹೇಳಿದರು.
ಇದೇ ವೇಳೆ ತಾಲೂಕಿನ ಪೀರನವಾಡಿಗೆ ಭೇಟಿ ನೀಡಿದ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮೂರ್ತಿಗೂ ಮಾಲಾರ್ಪಣೆ ಮಾಡಿದರು. ಈ ವೇಳೆ ಕರವೇ ಕಾರ್ಯಕರ್ತರು ಜೈ ಜೈ ರಾಯಣ್ಣ.. ಜೈ ಜೈ ಚೆನ್ನಮ್ಮ ಎಂದು ಘೋಷಣೆ ಕೂಗಿ ಸಂತೋಷ ವ್ಯಕ್ತಪಡಿಸಿದರು.