ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮೂರು ವರ್ಷದ ಬಳಿಕ ನಡೆಯುತ್ತಿರುವ ಅದ್ಧೂರಿ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗುವ 50 ಸಾವಿರ ಜನರಿಗೆ ಹುಕ್ಕೇರಿ ಹಿರೇಮಠ ವತಿಯಿಂದ 1 ಲಕ್ಷ ಹೋಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯೋತ್ಸವಕ್ಕೆ ಬರುವ ಕನ್ನಡಿಗರಿಗೆ ಒಂದು ಲಕ್ಷ ಹೋಳಿಗೆ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯೋತ್ಸವದಂದು ಇಡೀ ರಾಜ್ಯವೇ ಬೆಳಗಾವಿ ಕಡೆಗೆ ತಿರುಗಿ ನೋಡುತ್ತಿರುತ್ತದೆ. ಅಷ್ಟೊಂದು ವೈಭವಯುತವಾದ ಕನ್ನಡ ರಾಜ್ಯೋತ್ಸವಕ್ಕೆ ಬೆಳಗಾವಿ ಸಾಕ್ಷಿಯಾಗುತ್ತದೆ. ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ 50 ಸಾವಿರ ಕನ್ನಡಿಗರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ಒಬ್ಬರಿಗೆ ತಲಾ ಎರಡು ಹೋಳಿಗೆಯಂತೆ ಒಂದು ಲಕ್ಷ ಹೋಳಿಗೆ ಸಿದ್ಧಪಡಿಸುತ್ತೇವೆ ಎಂದರು.
ಇದನ್ನೂ ಓದಿ:ರಾಜ್ಯೋತ್ಸವ ಪ್ರಶಸ್ತಿ: ಜಿಲ್ಲಾವಾರು, ಕ್ಷೇತ್ರವಾರು ಆದ್ಯತೆ, ಅರ್ಜಿ ಸಲ್ಲಿಸದ ಅರ್ಹರ ಅಚ್ಚರಿ ಆಯ್ಕೆ
ಹೋಳಿಗೆ ಜೊತೆಗೆ ಊಟದಲ್ಲಿ ಬದನೆಕಾಯಿ ಪಲ್ಯ, ಅನ್ನ ಸಾಂಬಾರು ಇರಲಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿಯ 200 ಬಾಣಸಿಗರು ಊಟ ಸಿದ್ಧಪಡಿಸಲಿದ್ದಾರೆ. 150 ಜನ ಹೆಣ್ಣಮಕ್ಕಳಿಂದ ಹೋಳಿಗೆ, 50 ಪುರುಷರಿಂದ ಅನ್ನ-ಸಾಂಬಾರು, ಕಾಯಿಪಲ್ಯ ತಯಾರಿಸಲಾಗುತ್ತದೆ. ಜಿಲ್ಲಾಧಿಕಾರಿ ಸೇರಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹುಕ್ಕೇರಿ ಹಿರೇಮಠಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಿರಿಯ ನಟ ಸಾಯಿಕುಮಾರ್, ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಹೋಳಿಗೆ ದಾಸೋಹಕ್ಕೆ ಚಾಲನೆ ಕೊಡುತ್ತಾರೆ. ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಮಧ್ಯಾಹ್ನ 1 ಗಂಟೆಯಿಂದಲೇ ಹೋಳಿಗೆ ದಾಸೋಹ ಪ್ರಾರಂಭ ಆಗಲಿದೆ. ಬೆಳಗಾವಿಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ನಡೆಯುತ್ತದೆ. ಹೀಗಾಗಿ, ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು. ಹೆಚ್ಚಿನ ಅನುದಾನ ಬಿಡುಗಡೆಯಾದ್ರೆ ರಾಜ್ಯೋತ್ಸವ ಆಚರಣೆಗೆ ಉತ್ಸಾಹವು ವೃದ್ಧಿ ಆಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ವಿಶ್ವ ದಾಖಲೆ ನಿರ್ಮಿಸಿದ ಕೋಟಿ ಕಂಠ ಗಾಯನ; ಕನ್ನಡಾಭಿಮಾನದ ಹಾಡಿಗೆ ದನಿಯಾದ ಸಿಎಂ
50 ಸಾವಿರ ಜನರಿಗೆ ಸಿದ್ಧವಾಗಲಿರುವ ಊಟಕ್ಕೆ ಎಲ್ಲಾ ಭಾಗದಿಂದ ದಿನಸಿ ಬಳಕೆ ಮಾಡಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬೆಲ್ಲ, ಗದಗ ಜಿಲ್ಲೆಯ ಕಡಲೆ, ಬೆಳಗಾವಿ ಜಿಲ್ಲೆಯ ಅಡುಗೆ ಎಣ್ಣೆ, ಗುಜರಾತ್ ರಾಜ್ಯದ ಗೋಧಿ ಹಿಟ್ಟು, ದಾವಣಗೆರೆಯ ಅಕ್ಕಿ, ಶಿವಮೊಗ್ಗದಿಂದ 50 ಸಾವಿರಕ್ಕೂ ಅಧಿಕ ಅಡಿಕೆ ಎಲೆಯನ್ನು ಸರಬರಾಜು ಮಾಡಿಕೊಳ್ಳಲಾಗುತ್ತಿದೆ ಎಂದು ಹುಕ್ಕೇರಿ ಹಿರೇಮಠದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದರು.