ಬೆಳಗಾವಿ :ನಾಡು ನುಡಿ ಹೋರಾಟದಲ್ಲಿ ಬೆಳಗಾವಿಯ ಕೊಡುಗೆ ಅಪಾರ. ಜಿಲ್ಲೆಯ ಅನೇಕ ಹೋರಾಟಗಾರರು ಕನ್ನಡಕ್ಕೆ ತಮ್ಮದೇ ರೀತಿಯ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ನಗರದ ಸಿಪಿಇಡಿ ಮೈದಾನದಲ್ಲಿ ಜಿಲ್ಲಾಡಳಿತದಿಂದ ನಡೆಯುತ್ತಿರುವ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಭೀಕರ ಪ್ರವಾಹದಿಂದ ಜಿಲ್ಲೆಯ ಅನೇಕ ಹಳ್ಳಿಗಳು ತೊಂದರೆ ಅನುಭವಿಸಿವೆ. ಪ್ರವಾಹ ಪೀಡಿತ ನಿರಾಶ್ರಿತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡಲು ಸರ್ಕಾರದಿಂದ ಪರಿಹಾರ ನೀಡಲಾಗಿದ್ದು. ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ ಸರ್ಕಾರ ಮಾಡುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಿಪ್ಪಾಣಿಯಲ್ಲಿ ರಾಜ್ಯೋತ್ಸವಕ್ಕೆ ಮಿಶ್ರ ಪ್ರತಿಕ್ರಿಯೆ:
ಬೆಳಗಾವಿ ಜಿಲ್ಲೆಯ ಗಡಿಭಾಗವಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ರಾಜ್ಯೋತ್ಸವಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆಯಿಂದ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ ಮಾಡಿ ಎಂಇಎಸ್ ಕಾರ್ಯಕರ್ತರು ಕರಾಳ ದಿನ ಆಚರಿಸಿದರು. ಪಟ್ಟಣದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಕನ್ನಡ ಪರ ಸಂಘಟನೆಗಳಿಂದ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡಿದರು. ತಾಲೂಕು ಆಡಳಿತ ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ನಗರದಾದ್ಯಂತ ಕನ್ನಡಾಂಬೆಯ ಮೆರವಣಿಗೆ ನಡೆಸಲಾಯಿತು.