ಬೆಳಗಾವಿ : ಜಿಲ್ಲೆಯಲ್ಲೂ ಕೂಡ 65ನೇ ಕನ್ನಡ ರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನಾಡ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆಚಾಲನೆ ನೀಡಿದರು.
ಕುಂದಾನಗರಿಯಲ್ಲಿ ಕಳೆ ಕಟ್ಟಿದ ಕನ್ನಡ ರಾಜ್ಯೋತ್ಸವ ಸಂಭ್ರಮ ನಗರದ ಸಿಪಿಎಡ್ ಮೈದಾನದಲ್ಲಿ ಸಚಿವರು ನಾಡದೇವಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಪರೇಡ್ ವೀಕ್ಷಿಸಿ, ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತಾನಾಡಿದ ಸಚಿವ ರಮೇಶ್ ಜಾರಕಿಹೊಳಿ, ಸಂಗೀತ, ಶಿಕ್ಷಣ ಮತ್ತು ಬಯಲಾಟ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಅನಂತ ತೇರದಾಳ, ಕೆಂಪವ್ವ ಹರಿಜನ ಹಾಗೂ ಅಶೋಕ ಶೆಟ್ಟರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಬಿ.ಎಸ್.ಯಡಿಯೂರಪ್ಪರವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಇಂತಹ ಸಂಕಷ್ಟದ ಕಾಲದಲ್ಲಿಯೂ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಪ್ರವಾಹ ಸಂತ್ರಸ್ತರಿಗೆ ಬದುಕು ಕಟ್ಟಿಕೊಡುವ ದೃಢ ಸಂಕಲ್ಪ ಮಾಡಿದೆ ಎಂದರು.
ಅಖಂಡ ಕರ್ನಾಟಕದ ನಿರ್ಮಾಣದ ಕನಸು, ನನಸು ಮಾಡಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈ ಜೋಡಿಸೋಣ. ಕನ್ನಡ ನಾಡು-ನುಡಿ, ನೆಲ-ಜಲ ಸಂರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿರುತ್ತದೆ. ನಾವೆಲ್ಲರೂ ಒಂದಾಗಿ ಕನ್ನಡದ ತೇರನ್ನು ಮುನ್ನಡೆಸೋಣ. ಕರ್ನಾಟಕವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸೋಣ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನಗೈದು 20 ಜನ ಕೊರೊನಾ ವಾರಿಯರ್ಸ್ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಎಂ ಜಿ ಹಿರೇಮಠ, ಜಿಪಂ ಸಿಇಒ ದರ್ಶನ ಹೆಚ್ ವಿ, ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಮಹಾನಗರ ಪಾಲಿಕೆ ಆಯಕ್ತ ಜಗದೀಶ್ ಕೆ ಹೆಚ್, ಡಿಸಿಪಿ ಡಾ.ವಿಕ್ರಮ ಆಮಟೆ ಉಪಸ್ಥಿತರಿದ್ದರು.