ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಮೂರು ವರ್ಷಗಳ ಬಳಿಕ ಇಂದು ಅತೀ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗಿದೆ.
ಕೊರೋನಾ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ರಾಜ್ಯೋತ್ಸವವನ್ನು ನಿರ್ಬಂಧಿಸಲಾಗಿತ್ತು. ಮೂರು ವರ್ಷಗಳ ಬಳಿಕ ಇಂದು ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲಾಗಿದೆ. ಕುಂದಾನಗರಿಯಲ್ಲಿ ನಿನ್ನೆ 12 ಗಂಟೆಯಿಂದಲೇ ಸಂಭ್ರಮಾಚರಣೆ ಆರಂಭಿಸಲಾಗಿದ್ದು, ಚನ್ನಮ್ಮ ವೃತ್ತದಲ್ಲಿ ಮಧ್ಯರಾತ್ರಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೇಕ್ ಕಟ್ ಮಾಡಿ ಚಾಲನೆ ರಾಜ್ಯೋತ್ಸವಕ್ಕೆ ನೀಡಲಾಯಿತು.
ಬೆಳಗ್ಗೆ 10.30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪೂಜೆ ಸಲ್ಲಿಸಿ ಬಳಿಕ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದರು. ಈ ವೇಳೆ ಬೆಳಗಾವಿ ಬಿಜೆಪಿ ಸಂಸದೆ ಮಂಗಳಾ ಅಂಗಡಿ, ಬಿಜೆಪಿ ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ್, ಡಿಸಿ ನಿತೇಶ್ ಪಾಟೀಲ್, ಎಸ್‌ಪಿ ಡಾ.ಸಂಜೀವ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಜಿ.ಪಂ.ಸಿಇಒ ದರ್ಶನ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆಳಗಾವಿಯ 14 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಾದ ಬಳಿಕ ನೂರಕ್ಕೂ ಹೆಚ್ಚು ರೂಪಕ ವಾಹನಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ರಾಜ್ಯೋತ್ಸವ ಮೆರವಣಿಗೆಯಲ್ಲಿ ಅಪ್ಪು ಫೋಟೋಗಳು ರಾರಾಜಿಸುತ್ತಿದ್ದವು. ಕೈಯಲ್ಲಿ ಅಪ್ಪು ಫೋಟೋ, ಮೈ ಮೇಲೆ ಅಪ್ಪು ಚಿತ್ರದ ಟೀ ಶರ್ಟ್. ಅಪ್ಪು ಗತ್ತು ದೇಶಕ್ಕೆ ಗೊತ್ತು.. ಬೆಳಗಾವಿ ಎಂದೆಂದೂ ಕನ್ನಡಿಗರ ಸ್ವತ್ತು ಎಂಬ ಬರಹದ ಟೀಶರ್ಟ್ ತೊಟ್ಟು ಅಭಿಮಾನಿಗಳು ಸಂಭ್ರಮಿಸಿದರು. ಅಲ್ಲದೇ 10 ಸಾವಿರ ಅಡಿ ಉದ್ದದ ಕನ್ನಡ ಬಾವುಟ ಹಿಡಿದು ಸುಮಾರು ಮೂರು ಕಿಲೋಮೀಟರ್‌ವರೆಗೆ ಯುವಕರು ಹೆಜ್ಜೆ ಹಾಕಿದರು.