ಬೆಳಗಾವಿ: ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವು ವಿವಾದದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹಸ್ತಕ್ಷೇಪಕ್ಕೆ ಬೆಳಗಾವಿ ಕನ್ನಡ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕನ್ನಡ ಸಂಘಟನೆಗಳ ಅಸಮಾಧಾನ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಮಾತನಾಡಿ, ವಿವಾದದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಒಡೆದು ಆಳುವ ನೀತಿಗೆ ಕೈ ಹಾಕಿದೆ. ರಾಯಣ್ಣನನ್ನು ಒಂದು ಜಾತಿಗೆ ಸೀಮಿತಗೊಳಿಸಲು ಸರ್ಕಾರ ಹೊರಟಿದೆ. ಜಿಲ್ಲಾ ಉಸ್ತುವಾರಿ ಸಚಿವರು ಒಂದೇ ಜಾತಿಯ ಮುಖಂಡರನ್ನು ಮಾತ್ರ ಕರೆಯಿಸಿ ಮಾತನಾಡುತ್ತಿದ್ದಾರೆ ಎಂದು ದೂರಿದರು.
ಮೊದಲಿದ್ದ ಸ್ಥಳದಲ್ಲೇ ಪುತ್ಥಳಿ ನಿರ್ಮಾಣವಾಗಬೇಕು. ಈಗಾಗಲೇ ಇರುವ ಮೂರ್ತಿಗಳನ್ನು ಪಕ್ಕಕ್ಕೆ ಸರಿಸಿ ಖಾಸಗಿಯವರಿಗೆ ವೃತ್ತ ಮಾಡಲು ಅನುಮತಿ ಕೊಡಲಾಗಿದೆ. ಇಂಥ ಸಮಯದಲ್ಲಿ ಸುಪ್ರೀಂಕೋರ್ಟ್ ನಿದರ್ಶನ ಅಡ್ಡಿಯಾಗಲ್ಲವೇ?, ರಾಯಣ್ಣ ಮೂರ್ತಿ ಕೂರಿಸಲು ಮಾತ್ರ ಕೋರ್ಟ್ ನಿರ್ದೇಶನ ಬೇಕೇ ಎಂದು ಸಚಿವ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹಾಲುಮತ ಸಂಘಟನೆ ರಾಜ್ಯಾಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಅವರನ್ನು ಪ್ರವಾಸಿ ಮಂದಿರದ ಆವರಣದಲ್ಲಿ ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡರು.