ಕರ್ನಾಟಕ

karnataka

ETV Bharat / state

ಮಹಾ ಕ್ಯಾತೆ ಗಂಭೀರವಾಗಿ ಪರಿಗಣಿಸಿ ; ಸಿಎಂಗೆ ಕನ್ನಡ ಸಂಘಟನೆ ಕ್ರಿಯಾ ಸಮಿತಿ ಪತ್ರ - karnataka rajyotsava latest news

ಮಹಾರಾಷ್ಟ್ರ ಸರ್ಕಾರದ ನಿರ್ಧಾರದ ಬಗ್ಗೆ ಕರ್ನಾಟಕ ಸರ್ಕಾರ ತನ್ನ ತೀವ್ರ ಆಕ್ಷೇಪ ಮತ್ತು ಪ್ರತಿಭಟನೆ ವ್ಯಕ್ತಪಡಿಸದೇ ಮೌನ ವಹಿಸಿದರೆ ರಾಜ್ಯದ ಕನ್ನಡಿಗರಿಗೆ ತಪ್ಪು ಸಂದೇಶ ಹೋಗುವದು ನಿಶ್ಚಿತ. ಆದ್ದರಿಂದ ತಾವು ಈ ವಿಷಯದ ಗಂಭೀರತೆಯನ್ನು ಅರಿತುಕೊಳ್ಳುವಂತೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಆಗ್ರಹಿಸಿದೆ..

Kannada organization Kriya Samiti who wrote a letter to CM BSY
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ

By

Published : Oct 30, 2020, 6:46 PM IST

ಬೆಳಗಾವಿ:ರಾಜ್ಯ ರಾಜ್ಯೋತ್ಸವ ಸಂಭ್ರಮದಲ್ಲಿರುವಾಗ ಮಹಾರಾಷ್ಟ್ರ ಸರ್ಕಾರದ ಸಚಿವರು ಬ್ಲ್ಯಾಕ್ ಡೇ ಆಚರಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಬೆಳಗಾವಿಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಇದೇ ನವೆಂಬರ್​ 1 ರಂದು ರಾಜೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ನೆರೆಯ ಮಹಾರಾಷ್ಟ್ರ ಸರ್ಕಾರವು ಕರಾಳ ದಿನವನ್ನು ಆಚರಿಸುವ ನಿರ್ಧಾರ ಕೈಗೊಂಡಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. ಒಕ್ಕೂಟ ವ್ಯವಸ್ಥೆಯ ವಿರೋಧಿ ಕ್ರಮವಾಗಿದೆ. ಉಭಯ ರಾಜ್ಯಗಳ ನಡುವಣ ಗಡಿ ವಿವಾದವು 2004ರಿಂದಲೂ ಸುಪ್ರೀಂಕೋರ್ಟ್ ನ್ಯಾಯಾಲಯದ ಮುಂದಿದೆ. ಆದರೂ ನವೆಂಬರ್ 1ರಂದು ಮಹಾರಾಷ್ಟ್ರ ಸರ್ಕಾರದ ಇಡೀ ಮಂತ್ರಿ ಮಂಡಳದ ಸಚಿವರು ಕೈಗೆ ಕಪ್ಪು ಪಟ್ಟಿ ಧರಿಸಿಯೇ ಕಾರ್ಯ ನಿರ್ವಹಿಸುವ ನಿರ್ಧಾರ ಕೈಗೊಂಡಿರುವುದು ಸರ್ವೋನ್ನತ ನ್ಯಾಯಾಲಯದ ನಿಂದನೆಯಾಗಿದೆ.

ಒಂದು ರಾಜ್ಯ ರಾಜ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಮತ್ತೊಂದು ರಾಜ್ಯವು ಈ ರೀತಿ ಅಧಿಕೃತವಾಗಿ ಕರಾಳ ದಿನ ಆಚರಿಸುವುದು ನಮ್ಮ ರಾಜ್ಯದ ಮೇಲೆ ನಡೆಸಿದ ಸರ್ಕಾರಿ ದಾಳಿಯೇ ಸರಿ. ಈ ಕ್ರಮವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಇದನ್ನು ನಮ್ಮ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಹಾರಾಷ್ಟ್ರ ಸರ್ಕಾರದ ನಿರ್ಧಾರದ ಬಗ್ಗೆ ಅಲ್ಲಿಯ ಗಡಿ ಉಸ್ತುವಾರಿ ಸಚಿವರುಗಳಾದ ಛಗನ್ ಭುಜಬಲ ಮತ್ತು ಏಕನಾಥ ಶಿಂಧೆ ಅವರು ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಅಲ್ಲದೇ ಏಕನಾಥ ಶಿಂಧೆಯವರ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಆಗಿದೆ.

ಮಹಾರಾಷ್ಟ್ರ ಸರ್ಕಾರದ ನಿರ್ಧಾರದ ಬಗ್ಗೆ ಕರ್ನಾಟಕ ಸರ್ಕಾರ ತನ್ನ ತೀವ್ರ ಆಕ್ಷೇಪ ಮತ್ತು ಪ್ರತಿಭಟನೆ ವ್ಯಕ್ತಪಡಿಸದೇ ಮೌನ ವಹಿಸಿದರೆ ರಾಜ್ಯದ ಕನ್ನಡಿಗರಿಗೆ ತಪ್ಪು ಸಂದೇಶ ಹೋಗುವುದು ನಿಶ್ಚಿತ. ಆದ್ದರಿಂದ ತಾವು ಈ ವಿಷಯದ ಗಂಭೀರತೆಯನ್ನು ಅರಿತುಕೊಳ್ಳುವಂತೆ ಕ್ರಿಯಾ ಸಮಿತಿ ಆಗ್ರಹಿಸಿದೆ.

ABOUT THE AUTHOR

...view details